ಕೊಂಕಲ್ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಯಾದಗಿರಿ, ಆ.14
ತಾಲೂಕಿನ ಕೊಂಕಲ್ ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ನಂದೇಪಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಇಂದಿರಾ ಆವಾಸ್, ಆಶ್ರಯ ಯೋಜನೆ ಹಾಗೂ ಬಸವ ವಸತಿ ಯೋಜನೆಯಡಿ ಮನೆಗಳು ಮಂಜೂರಾಗಿವೆ. ಈಗಾಗಲೇ ಕೆಲ ಮನೆಗಳ ನಿರ್ಮಾಣ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಆದರೆ ಫಲಾನುಭವಿಗಳಿಗೆ ಅನುದಾನ ನೀಡಲು ಕೊಂಕಲ್ ಗ್ರಾಪಂ ಪಿಡಿಒ ಅವರು ಹಣ ಕೇಳುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಶೇ.10ರಷ್ಟು ಲಂಚದ ಬೇಡಿಕೆ: ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿರುವ ಮನೆಗಳ ಚೆಕ್ ನೀಡಲು ಶೇ.10ರಷ್ಟು ಲಂಚ ಕೇಳುತ್ತಿದ್ದಾರೆ. ಹೀಗಾಗಿ ಬಡ ಕುಟುಂಬಗಳು ಸಾಲ ಮಾಡಿಕೊಂಡು ಮನೆ ಕಟ್ಟಿಕೊಂಡು ಈಗ ಹಣ ಪಡೆಯಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕಾನೂನಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಗ್ರಾಪಂಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಲಕ್ಷಾಂತರ ರು. ಅನುದಾನ ನೀಡುತ್ತಿದೆ. ಆದರೆ ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಬದಲಾಗಿ ಪಿಡಿಒ ನಿಷ್ಕಾಳಜಿ ವಹಿಸುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಮನೆಗಳನ್ನು ಕಟ್ಟಿಕೊಳ್ಳಲು ನಾನಾ ವಸತಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಆದರೆ ಅಧಿಕಾರಿಗಳು ಮಾತ್ರ ಮನಸ್ಸಿಗೆ ಬಂದಂತೆ ಆಡಳಿತ ನಡೆಸುವ ಮೂಲಕ ಹಣ ವಸೂಲಿ ಮಾಡುತ್ತಿರುವುದು ಆಘಾತಕಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಂಚ ನೀಡದ್ದಕ್ಕೆ ಚೆಕ್ ಕೊಡುತ್ತಿಲ್ಲ: ಫಲಾನುಭವಿಗಳು ಹಣ ಕೊಡಲು ನಿರಾಕರಿಸುತ್ತಿರುವುದರಿಂದ ಶಂಕ್ರಮ್ಮ, ಹಣಮವ್ವ, ತಿಪ್ಪಣ್ಣ ಬೇಡರ, ಶಂಕ್ರಮ್ಮ ಜಕಾತಿ, ಗೌರಮ್ಮ ಹಾಗೂ ನಿಂಗಪ್ಪ ಎಂಬ ಫಲಾನುಭವಿಗಳಿಗೆ ಇನ್ನೂ ಕೂಡ ಚೆಕ್ ನೀಡಿಲ್ಲ. ಹೀಗಾಗಿ ಅವರು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಇದಲ್ಲದೇ ಕೆಲವರಿಗೆ ಹೆದರಿಸುವ ಮೂಲಕ ಹಣವನ್ನು ವಸೂಲಿ ಮಾಡುತ್ತಿದ್ದಾರೆ.
ಕ್ರಮ ಕೈಗೊಳ್ಳದಿದ್ರೆ ಉಗ್ರ ಪ್ರತಿಭಟನೆ: ಆದರೂ ಈ ಬಗ್ಗೆ ಮೇಲಾಧಿಕಾರಿಗಳು ಪಿಡಿಒ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಚೆಕ್ ನೀಡದಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಷ್ಕಾಳಜಿ ವಹಿಸಿದರೆ ಮುಂಬರುವ ದಿನಗಳಲ್ಲಿ ಗಂಭೀರವಾಗಿ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಭಾಗಪ್ಪ ಕೊಂಕಲ್, ಲೀಲಾವತಿ, ನಿಂಗಪ್ಪ, ವಿದ್ಯಾವತಿ, ಶಕುಂತಲಾ ಇತರರಿದ್ದರು.