ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
ಶಹಾಪುರ: ಮನೆಗಳ ನಿರ್ಮಾಣವಾಗಿದ್ದರೂ ಬಿಲ್ ಪಾವತಿಸಲು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಅಸಮಾಧಾನಗೊಂಡು ರಸ್ತಾಪುರ ಗ್ರಾಮದ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಬಿಲ್ ಪಾವತಿಗಾಗಿ ಆಗ್ರಹಿಸಿ ಪ್ರತಿಭಟಿಸಿ ನಡೆಸಿದರು.
2010- 11ನೇ ಸಾಲಿನ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಯೋಜನೆಯ ಫಲ ತಲುಪುತ್ತಿಲ್ಲ. ಈ ಕುರಿತು ಮನವಿ ಮಾಡಿದರೆ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾಳಜಿ ವಹಿಸದೇ ದಿನದೂಡುತ್ತಿದ್ದಾರೆ ಎಂದು ಫಲಾನುಭವಿ ಮಹಿಳೆಯರು ಆರೋಪಿಸಿದರು.
ಪಂಚಾಯಿತಿಯು ಅಲ್ಪಸಂಖ್ಯಾತ ಯೋಜನೆಯ ಮನೆಗಳ ಫಲಾನುಭವಿಗಳಿಗೆ ಮನೆಗಳು ಪೂರ್ಣಗೊಂಡರೂ ಬಿಲ್ ಪಾವತಿಸಿಲ್ಲ. ಹೆಚ್ಚುವರಿಯಾಗಿ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ನೋಂದಣಿ ಮಾಡಿಸುವಲ್ಲೂ ಕಾಳಜಿ ವಹಿಸುತ್ತಿಲ್ಲ, ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಪ್ರತಿಭಟನಾನಿರತರಿಗೆ ಸಮಾಧಾನ ಹೇಳಿ ತಕ್ಷಣವೇ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಧರಣಿ ವಾಪಸ್ ಪಡೆಯಲಾಯಿತು. ಈ ಸಂದರ್ಭದಲ್ಲಿ ಫಲಾನುಭವಿ ಮಹಿಳೆಯರಾದ ಯಲ್ಲಮ್ಮ, ನಿಂಗಮ್ಮ ಪೂಜಾರಿ, ಚಂದಮ್ಮ ಅಲಗಿ, ಸುಶೀಲಮ್ಮ, ತಿಪ್ಪಮ್ಮ, ಶರಣಮ್ಮ ಮೇತ್ರಿ, ಬಸಮ್ಮ ನಡಿಗೇರಿ ಇತರರು ಇದ್ದರು.
ಮನೆ ಹಂಚಿಕೆಯಲ್ಲಿ ಅಕ್ರಮ; ಆರೋಪ
ಹುಣಸಗಿ: ಸಮೀಪದ ಅರಕೇರಾ(ಜೆ) ಗ್ರಾಮ ಪಂಚಾಯಿತಿಯಲ್ಲಿ ವಸತಿ ಯೋಜನೆಯೊಂದರಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಕರ್ನಾಟಕ ಮುಸ್ಲಿಂ ಕೌನ್ಸಿಲ್‌ನ ಗ್ರಾಮ ಘಟಕದ ಅಧ್ಯಕ್ಷ ಬಡೇಸಾಬ್ ಹವಾಲ್ದಾರ್ ಆರೋಪಿಸಿದ್ದಾರೆ.
ಈ ಬಗ್ಗೆ ಅವರು ಪಂಚಾಯತ್ ರಾಜ್ ಸಚಿವರಿಗೆ ಪತ್ರ ಬರೆದಿದ್ದು, ಅರಕೇರಾ(ಜೆ) ಗ್ರಾಪಂ ವ್ಯಾಪ್ತಿಯ ತೆಗ್ಗೆಳ್ಳಿ ಮತ್ತು ಶಾಖಾಪುರ(ಎಸ್.ಕೆ) ಗ್ರಾಮಗಳಲ್ಲಿ ಸರ್ಕಾರದ ನಿಯಮದಂತೆ ಗ್ರಾಮ ಸಭೆ ನಡೆಸದೇ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಮನೆ ನೋಂದಣಿ ಮಾಡಲಾಗಿದೆ ಎಂದು ದೂರಿದ್ದಾರೆ. ಒಟ್ಟು 35 ಮನೆಗಳನ್ನು ಅಕ್ರಮವಾಗಿ ನೋಂದಣಿ ಮಾಡಲಾಗಿದೆ ಎಂದು ಕೌನ್ಸಿಲ್‌ನ ಬಡೇಸಾಬ್ ಹವಾಲ್ದಾರ್ ಗಂಭೀರ ಆಪಾದನೆ ಮಾಡಿದ್ದಾರೆ. ಈ ಕುರಿತಂತೆ ಇಲಾಖೆಯಿಂದ ವಿವರವಾದ ತನಿಖೆ ಕೈಗೊಳ್ಳಬೇಕೆಂದು ರಾಜ್ಯದ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಬರೆದ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.