ತಪ್ಪಿತು ಭಾರಿ ದುರಂತ...!
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.14
ಸುದ್ದಿ ತಿಳಿದಾಕ್ಷಣ ಹಿರಿಯ ಅಧಿಕಾರಿಗಳಾರೂ ಜೇವರ್ಗಿಗೆ ಆಗಲಿ, ಸರ್ಕಾರಿ ಆಸ್ಪತ್ರೆಗೆ ಆಗಲಿ ಬುಧವಾರ ಮಧ್ಯರಾತ್ರಿ ಭೇಟಿ ನೀಡದೆ ಹೋಗಿದ್ದರೆ ಅನಾಹುತ ನಿಶ್ಚಿತವಾಗಿ ನಡೆಯುತ್ತಿತ್ತು... ಹೀಗೆಂದು ಉದ್ಗರಿಸಿದವರು ಈ ದುರಂತದ ಪ್ರತ್ಯಕ್ಷದರ್ಶಿ ಜೇವರ್ಗಿ ಸಾರ್ವಜನಿಕರು.
ಜಿಲ್ಲಾಧಿಕಾರಿಗಳು ವಸತಿ ನಿಲಯಕ್ಕೆ ಬಂದು, ಅಲ್ಲಿಂದ ಮಕ್ಕಳು ಸೂಕ್ತ ಹಾಗೂ ಸುರಕ್ಷಿತವಾಗಿ ಆಸ್ಪತ್ರೆ ಸೇರುವಂತೆ ಮಾಡಿದರು. ಅವರ ಕೆಲಸಕ್ಕೆ ಅದಾಗಲೇ ಸ್ಥಳೀಯ ಸಾರ್ವಜನಿಕರು ಸಾಥ್ ನೀಡಿದ್ದರಿಂದ ಈ ಕೆಲಸ ಇನ್ನೂ ಹಗುರಾಯ್ತು.
ಅವ್ಯವಸ್ಥೆ ಕಂಡು ದಂಗು: 'ಕನ್ನಡಪ್ರಭ' ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಸನ್ನಕುಮಾರ್, ಜೇವರ್ಗಿ ವಸತಿ ನಿಲಯದಲ್ಲಿನ ಅಡುಗೆ ಮನೆ ನೋಟ ಕಂಡು ದಂಗಾಗಿದ್ದಾಗಿ ಹೇಳಿದ್ದಾರೆ. ಅಲ್ಲಿನ ನೀರು ಸಂಗ್ರಹಗಾರ, ಕಾಳು- ಕಡಿ ದಾಸ್ತಾನು ಮಾಡುವ ಸ್ಥಳಗಳೆಲ್ಲವೂ ಕೊಳಕಾಗಿದ್ದರೂ ಆ ಕೆಲಸ ಅಲ್ಲಿ ನಿತ್ಯ ಸಾಗುತ್ತದಂತೆ. ಈ ಮಾಹಿತಿಯನ್ನು ಮಕ್ಕಳು, ಸ್ಥಳೀಯರು ನೀಡಿದಾಗ ಹೌಹಾರಿದೆ ಎಂದು ಜೇವರ್ಗಿ ನಿಲಯದ ಕೆಟ್ಟ ನೋಟ ವಿವರಿಸಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಕಳೆದೊಂದು ವರ್ಷದಿಂದ ಅಧಿಕಾರಿಗಳಿಲ್ಲ. ವಿಜಯಲಕ್ಷ್ಮೀ ಜೇವರ್ಗಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ. ಅವರಿಗೆ ಪ್ರಭಾರಿ ಅಧಿಕಾರಿ ಎಂದು ಜವಾಬ್ದಾರಿ ನೀಡಲಾಗಿದೆ. ವಸತಿ ನಿಲಯದಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಗೆ ಆಗಾಗ್ಗೆ ತಾವು ಹೇಳುತ್ತಲೇ ಇರುವುದಾಗಿ ತಿಳಿಸಿದರಲ್ಲದೆ ಶುಚಿತ್ವದ ಕೊರತೆಯೇ ಇಂತಹ ದುರಂತಗಳಿಗೆ ಮೂಲ ಎಂದರು.
ಜೀವದೊಂದಿಗೆ ಚೆಲ್ಲಾಟ ಬೇಡ: ಸುದ್ದಿ ತಿಳಿದ ತಕ್ಷಣ ಜೇವರ್ಗಿಗೆ ತಾವು ಹೋಗದೆ ಇದ್ದರೆ ಅಲ್ಲಿ ಪರಿಸ್ಥಿತಿ ನಿಭಾಯಿಸಲು ಹಿರಿಯ ಅಧಿಕಾರಿಗಳ ಕೊರತೆ ಉಂಟಾಗಿ ಎಲ್ಲವೂ ಆಯೋವುಯವಾಗುತ್ತಿತ್ತು. ಅಸ್ವಸ್ಥಗೊಂಡ ಮಕ್ಕಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೆ ಹೆಚ್ಚಿನ ತೊಂದರೆ ಎದುರಿಸುವ ಸಾಧ್ಯತೆಗಳೂ ಅಲ್ಲಿದ್ದವು ಎಂದು ಪ್ರಸನ್ನಕುಮಾರ್ ಹೇಳಿದರು. ಅಧಿಕಾರಿಗಳು ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡದೆ ತಮ್ಮ ಜವಾಬ್ದಾರಿ ನಿಭಾಯಿಸಿ ಶುಚಿ-ರುಚಿಯಾದ ಆಹಾರ ನೀಡಿದಲ್ಲಿ ಇಂತಹ ಅನಾಹುತಗಳು ನಡೆಯೋದಿಲ್ಲ. ಆದರೆ ಜಿಲ್ಲೆಯಲ್ಲಿ ಈ ಕೆಲಸ ಆಗುತ್ತಿಲ್ಲ ಎಂದರು.
ಬರುವ ದಿನಗಳಲ್ಲಿ ಈ ವಿಚಾರದಲ್ಲಿ ತಾವು ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ನಿಯಮಗಳನ್ನು ಮಾಡುವುದಾಗಿ ಹೇಳಿದರು. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೂ ಈ ಸಂಬಂಧ ವರದಿ ರವಾನಿಸಿ ಸಮಾಜ ಕಲ್ಯಾಣ ಇಲಾಖೆಗೆ ಕಾಯಕಲ್ಪ ನೀಡುವಂತೆ ಕೋರುವುದಾಗಿ ಪ್ರಸನ್ನಕುಮಾರ್ ಹೇಳಿದ್ದಾರೆ.
ನೋಟ- 1
ಜೇವರ್ಗಿ ಹಾಸ್ಟೆಲ್‌ನಲ್ಲಿ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ಮಂಗಳವಾರ ರಾತ್ರಿ 11.34ಕ್ಕೆ ತಿಳಿದಾಗ, ಮನೆಯಲ್ಲಿದ್ದ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ತಾವೇ ಖುದ್ದು ಕಾರ್ ಚಲಾಯಿಸಿಕೊಂಡು ಕೋರಂಟಿ ಹನುಮಂತ ದೇವರ ಮಂದಿರ ಬಳಿಯ ಚಾಲಕನ ಮನೆಗೆ ಬಂದರು. ಅಲ್ಲಿ ಚಾಲಕನನ್ನು ಎಬ್ಬಿಸಿಕೊಂಡು ರಿಂಗ್ ರಸ್ತೆ ಬಳಸಿ ಸರ್ಕಾರಿ ಆಸ್ಪತ್ರೆಗೆ ಧಾವಿಸಿದರು. ಅಲ್ಲಿನ ಮಕ್ಕಳ ಯೋಗಕ್ಷೇವು ವಿಚಾರಿಸಿ ಅದೇ ವೇಗದಲ್ಲಿ ಜೇವರ್ಗಿಗೆ ದೌಡಾಯಿಸಿದರು. ಅಲ್ಲಿನ ವಸತಿ ನಿಲಯದ ಅವ್ಯವಸ್ಥೆ ಕಂಡು ದಂಗಾದರು.
ನೋಟ- 2
ಇಷ್ಟೆಲ್ಲ ರಾದ್ಧಾಂತವಾಗಿ, 39 ಮಕ್ಕಳು ಜೀವನ್ಮರಣದ ಹೋರಾಟದಲ್ಲಿದ್ದರೂ ಸಹ ಜಿಲ್ಲಾ ಪ್ರಭಾರಿ ಸಮಾಜ ಕಲ್ಯಾಣಾಧಿಕಾರಿ, ಜೇವರ್ಗಿ ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಅವರು ಘಟನಾ ಸ್ಥಳದಲ್ಲಿ ಕಾಣದೆ ಇರುವ ಸಂಗತಿ ಸೇರಿದ್ದವರನ್ನು ಕೆರಳಿಸಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಖುದ್ದು ಜಿಲ್ಲಾಧಿಕಾರಿಗಳೇ ತಮ್ಮ ಮೊಬೈಲ್ ಮೂಲಕ ವಿಜಯಲಕ್ಷ್ಮೀ ಅವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನಗಳೂ ಕೈಗೂಡಲಿಲ್ಲವಂತೆ.
ನೋಟ- 3
ಜಿಲ್ಲಾಧಿಕಾರಿ ಅವರು ಸಮಾಜ ಕಲ್ಯಾಣಾಧಿಕಾರಿ ಅವರನ್ನು ಸಂಪರ್ಕಿಸುವ ಪ್ರಯತ್ನ ಕೈಬಿಟ್ಟರು. ಮರುಕ್ಷಣವೇ ಆ್ಯಂಬುಲೆನ್ಸ್ ಇತ್ಯಾದಿ ವಾಹನಗಳನ್ನೆಲ್ಲ ಸಜ್ಜುಗೊಳಿಸಿ ಪರಿಹಾರ ಕಾರ್ಯಾಚರಣೆಗೆ ಅಣಿಯಾದರು. ಮಕ್ಕಳಿಗೆ ಸೂಕ್ತ ವೈದ್ಯಕೀಯ ಸೇವೆ ದೊರಕುವಂತೆ ನೋಡಿಕೊಂಡರು. ಜೇವರ್ಗಿ ವೈದ್ಯ ಡಾ. ಸಿದ್ದು ಸೇರಿದಂತೆ ಹಲವರು ಮಕ್ಕಳ ಚಿಕಿತ್ಸೆಗೆ ಮುಂದಾದರು. ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಕಂಡಾಗ ಮಕ್ಕಳನ್ನು ಗುಲ್ಬರ್ಗಕ್ಕೆ ಕಳುಹಿಸಿದರು.