ಪ್ರಗತಿಪರ ಯೋಜನೆ ರೂಪಿಸಿ: ಮೇಲಿನಕೇರಿ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.14
ಜನಸಾಮಾನ್ಯರಿಗೆ ಸರ್ಕಾರಿ ಯೋಜನೆಗಳ ಅರಿವು ಬಹಳ ಮುಖ್ಯ. ಸಮುದಾಯದ ಪ್ರತಿಯೊಬ್ಬ ಸದಸ್ಯ ಅದರಲ್ಲಿ ವಿಶೇಷವಾಗಿ ಮಹಿಳೆಯರು, ಯುವಕರು, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ತೆಗೆದುಕೊಂಡು ಪ್ರಗತಿಪರ ಯೋಜನೆಗಳನ್ನು ರೂಪಿಸಿ ಸಹಕರಿಸಬೇಕೆಂದು ಕವಲಗಾ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶಿವಮ್ಮ ಮೇಲಿನಕೇರಿ ಅಭಿಪ್ರಾಯಪಟ್ಟರು.
ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಗುಲ್ಬರ್ಗ, ಬಿಜಾಪುರ ಘಟಕ ಮತ್ತು ಕಿರಣ ರೂರಲ್ ರಿಕನ್ಸ್‌ಟ್ರಕ್ಷನ್ ಸೊಸೈಟಿ, ಸಹಜೀವನ ಹಾಗೂ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಾಗರಗುಂಡಗಿ ಗ್ರಾಮದಲ್ಲಿ ಆಧಾರ್ ಕಾರ್ಡ್, ಆಹಾರ ಭದ್ರತೆ, ನೇರ ನಗದು ವರ್ಗಾವಣೆ ಮತ್ತು ಭೂ ಸ್ವಾಧೀನ ಪ್ರಚಾರಾಂದೋಲನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ವಿಚಾರ ಸಂಕಿರಣದ ಅತಿಥಿ ಉಪನ್ಯಾಸಕರಾದ ಕಿರಣ ರೂರಲ್ ರಿಕನ್ಸ್‌ಟ್ರಕ್ಷನ್ ಸೊಸೈಟಿ ಕಾರ್ಯದರ್ಶಿ ಎಂ.ಎಂ. ಶಿರಹಟ್ಟಿ ಮಾತನಾಡಿ, ದೇಶದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಕೇಂದ್ರ ಸರ್ಕಾರದ ನೇರ ಹಣ ವರ್ಗಾವಣೆ ಯೋಜನೆ ಅನುಷ್ಠಾನ ಮಾಡುತ್ತಿದ್ದು, ರಾಜ್ಯದ ತುಮಕೂರು, ಧಾರವಾಡ, ಮೈಸೂರು ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಯಲ್ಲಿದೆ ಎಂದರು.
ಗ್ರಾಮದ ಮುಖಂಡರಾದ ಸೋಮಶೇಖರ ಸಜ್ಜನ್, ಶಂಕರರಾವ ಚಿನ್ಮಳ್ಳಿ ಇದ್ದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ತಾಂತ್ರಿಕ ಸಹಾಯಕ ರಾಘವೇಂದ್ರ ವಾಳಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಯುವ ಮುಖಂಡ ಮೈಲಾರಿ ಹಬಸಿ ವಂದಿಸಿದರು.