'ಮೂಢನಂಬಿಕೆ ಕಿತ್ತೊಗೆಯಲು ವೈಚಾರಿಕತೆ ಮೈಗೂಡಿಸಿಕೊಳ್ಳಿ'
ಕನ್ನಡಪ್ರಭ ವಾರ್ತೆ , ಆಳಂದ , ಆ.14
ಮೂಢನಂಬಿಕೆ ಬೇರುಸಮೇತ ಕಿತ್ತೊಗೆಯಲು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವೈಚಾರಿಕತೆ ಮೈಗೂಡಿಸಿಕೊಳ್ಳಬೇಕೆಂದು ಸಾಹಿತಿ ಡಾ. ಪ್ರಭು ಖಾನಾಪುರೆ ಹೇಳಿದರು.
ತಾಲೂಕಿನ ಖಜೂರಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಚೌಡೇಶ್ವರಿ ಶಿಕ್ಷಣ ಸಂಸ್ಥೆ ಜಂಟಿಯಾಗಿ ಆಯೋಜಿಸಿದ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಹಿರೋಸಿಮಾ ನಾಗಾಸಾಕಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಹಿರೋಶಿಮಾ ನಾಗಾಸಾಕಿ ಪಟ್ಟಣಗಳ ಮೇಲೆ ಬಾಂಬ್‌ಸ್ಫೋಟ ಮಾಡಿದ್ದರಿಂದ ಆ ಪಟ್ಟಣಗಳು ಸರ್ವನಾಶವಾಗಿದ್ದವು. ಅದನ್ನು ಸರಿಪಡಿಸಲು 50 ವರ್ಷಗಳ ಕಾಲ ಅಲ್ಲಿನ ಜನರು ಶ್ರಮ ಪಡಬೇಕಾಯಿತು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸ್ಥಳೀಯ ಸಂಸ್ಥಾನ ಮಠದ ಮುರುಘೇಂದ್ರ ಶಿವಯೋಗಿಗಳು ಸಾನ್ನಿದ್ಯ ವಹಿಸಿ ಮಾತನಾಡಿದರು. ಮುಖ್ಯಗುರು ಶರಣಪ್ಪ ಘಂಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಸಾವಳೇಶ್ವರ, ತಾಪಂ ಸದಸ್ಯೆ ಪ್ರಭಾವತಿ ಢಗೆ, ಗ್ರಾಪಂ ಅಧ್ಯಕ್ಷ ವಸಂತ ಭದ್ರೆ, ಉಪಾಧ್ಯಕ್ಷೆ ಅರ್ಚನಾ ಢಗೆ, ಪ್ರಮುಖರಾದ ಗಂಗಾಧರ ಕುಂಬಾರ, ಶ್ರೀಮಂತ ವಾಡೆ, ಪ್ರಭು ದಂಡೆ, ಸುಭಾಶ್ಚಂದ್ರ ಕುಂಬಾರ, ಯೋಗಿರಾಜ ಮಾಡ್ಯಾಳೆ, ಮಹಿಬೂಬ್ ಪಟ್ಟಣ ಮಾತನಾಡಿದರು.
ಗಿರೀಶ ಉಮರಾಣಿ ಸ್ವಾಗತಿಸಿದರು. ಗುರುಲಿಂಗ ಹೊನ್ನಳ್ಳಿ ನಿರೂಪಿಸಿದರು. ರೇವಣಪ್ಪ ಹಿರೇಮಠ ವಂದಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.