ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಸತಿ ಫಲಾನುಭವಿ ಕಂಗಾಲು

Vishwanath S
Updated On : 15 Aug 2013, 11:44 am

ಕನ್ನಡಪ್ರಭ ವಾರ್ತೆ, ಸುರಪುರ, ಆ.14
ತಾಲೂಕಿನ ಬಸವ ವಸತಿ ಯೋಜನೆ ಅಡಿಯಲ್ಲಿ ವಸತಿ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಕೂಡಲೇ ಹಣ ಪಾವತಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
  2010- 11ನೇ ಸಾಲಿನ ಬಸವ ವಸತಿ ಯೋಜನೆಯಡಿ ತಾಲೂಕಿಗೆ 10 ಸಾವಿರ ಮನೆ ಮಂಜುರಾಗಿದ್ದವು. ಆಯ್ಕೆಯಾದ ಫಲಾನುಭವಿಗಳು ತಮ್ಮ ಗುಡಿಸಲು ನೆಲಸಮಗೊಳಿಸಿ ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಇದರಲ್ಲಿ ಕೇವಲ ಶೇ.60ರಷ್ಟು ಫಲಾನುಭವಿಗಳಿಗೆ ಮಾತ್ರ ಹಣ ನೀಡಲಾಗಿದೆ. ಉಳಿದ ಶೇ. 40ರಷ್ಟು ಫಲಾನುಭವಿಗಳಿಗೆ ಹಣ ನೀಡಿಲ್ಲ. ಫಲಾನುಭವಿಗಳು ಹಣಕ್ಕಾಗಿ ನಿತ್ಯ ಪರದಾಡುತಿದ್ದಾರೆ ಎಂದು ವೇದಿಕೆ ಆರೋಪಿಸಿದೆ.
ಫಲಾನುಭವಿಗಳಿಗಿಲ್ಲ ಅನುದಾನ ಭಾಗ್ಯ: ಫಲಾನುಭವಿಗಳು ಮನೆ ಕಟ್ಟಿಕೊಂಡು ಎರಡು ವರ್ಷ ಕಳೆದಿದೆ. ಜಿಪಿಆರ್‌ಎಸ್ ಕೂಡಾ ಮುಗಿದಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜಿಲ್ಲಾಡಳಿತ ವೈಫಲ್ಯದಿಂದ ಬಡ ಫಲಾನುಭವಿಗಳ ಕೈಗೆ ಹಣ ದೊರಕುತ್ತಿಲ್ಲ. ಮನೆ ಕಟ್ಟಿಕೊಳ್ಳಲು ಮಾಡಿದ ಸಾಲ ತೀರಿಸಲಾಗದೆ ಫಲಾನುಭವಿಗಳು ಗುಳೆ ಹೋಗುತ್ತಿದ್ದಾರೆ. ಈ ಬಗ್ಗೆ ಆಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ಬಡ ಫಲಾನುಭವಿಗಳ ಗೋಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದೆ.
ರಾಜಕೀಯ ಪುಢಾರಿಗಳದ್ದೇ ಪಾರುಪತ್ಯ: ಕೆಲ ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ರಾಜಕೀಯ ಪುಢಾರಿಗಳು ಶಿಫಾರಸ್ಸು ಮಾಡಿದ ಫಲಾನುಭವಿಗಳಿಗೆ ಮಾತ್ರ ಚೆಕ್ ವಿತರಣೆ ಮಾಡಿದ್ದಾರೆ. ಮುಗ್ಧ ಮತ್ತು ಬಡ ಫಲಾನುಭವಿಗಳಿಗೆ ಇದುವರೆಗೂ ಚೆಕ್ ವಿತರಿಸದೆ ಕಾಲಹರಣ ಮಾಡುತ್ತಿದ್ದಾರೆ. ಕಾರಣ ಯೋಜನೆಯಲ್ಲಿ ಆಯ್ಕೆಗೊಂಡು ಮನೆ ಕಟ್ಟಿಕೊಂಡ ಎಲ್ಲ ಫಲಾನುಭವಿಗಳಿಗೆ ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ತಾಲೂಕು ಅನುಷ್ಠಾನ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ದೂರಿನಲ್ಲಿ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೈರಿಮಡ್ಡಿ, ತಾಲೂಕಾಧ್ಯಕ್ಷ ವೆಂಕಟೇಶ ಪ್ಯಾಪ್ಲಿ, ಅಂಬ್ಲಯ್ಯ ಬೇಟೆಗಾರ ಆಗ್ರಹಿಸಿದ್ದಾರೆ.
  15 ದಿನಗಳ ಒಳಗಾಗಿ ಕ್ರಮ ಕೈಗೊಳ್ಳಬೇಕು. ವಿಳಂಬವಾದಲ್ಲಿ ತಾಪಂ ಕಚೇರಿ ಎದುರು ಆ. 26ರಂದು ನೂರಾರು ವಂಚಿತ ಫಲಾನುಭವಿಗಳೊಂದಿಗೆ ಉಗ್ರ ಸ್ವರೂಪದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement