ಶಾಲೆ ಮಕ್ಕಳಿಗೆ ಕೃಷಿ ಪಾಠ
ಶಿವಮೊಗ್ಗ: ಕೃಷಿ ಎಂದರೆ ಬಹುತೇಕ ಮಕ್ಕಳಿಗೆ ಅಲರ್ಜಿ. ತಾವು ಕಲಿಯುವುದೇ ಕೃಷಿಯಿಂದ ದೂರ ಉಳಿಯುವುದಕ್ಕೆ ಹಾಗೂ ಪಟ್ಟಣ ಸೇರುವುದಕ್ಕೆ ಎಂಬ ಭಾವನೆ ಗ್ರಾಮೀಣ ಮಕ್ಕಳಲ್ಲಿ ಬೇರೂರುತ್ತಿರುವ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಾಲೆ ಮಕ್ಕಳಿಗೆ ಕೃಷಿ ಪಾಠ ಎಂಬ ವಿನೂತನ ಕಾರ್ಯಕ್ರಮ ನಡೆಸಿತು. ಜಮೀನಿನಲ್ಲಿ ಕಡಮೆ ಬಂಡವಾಳ ಹೂಡಿ ಲಾಭದಾಯಕವಾಗಿ ಬತ್ತ ಬೇಸಾಯ ಕ್ರಮದ ಬಗ್ಗೆ ಪ್ರಾಯೋಗಿಕವಾಗಿ ಮಕ್ಕಳಿಗೆ ಕೃಷಿ ಪಾಠವನ್ನು ಕಲ್ಲುಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಮಕ್ಕಳಿಂದ ನಾಟಿ: ಗ್ರಾಮದ ರಾಮಕೃಷ್ಣ ಎಂಬುವರ ಗದ್ದೆಯಲ್ಲಿ ಕಲ್ಲುಕೊಪ್ಪ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಬತ್ತದ ಬೀಜದ ಆಯ್ಕೆ, ಬೀಜೋಪಚಾರದ ಅವಶ್ಯಕತೆ ಸಸಿ ಮಡಿ ತಯಾರಿ, ಗದ್ದೆ ಭೂಮಿ ತಯಾರಿ ಹಾಗೂ ಶ್ರೀಪದ್ಧತಿಯಲ್ಲಿ ಬತ್ತ ಸಸಿ ನಾಟಿ ವಿಧಾನಗಳ ಬಗ್ಗೆ ಪೂರ್ವ ಮಾಹಿತಿ ನೀಡಿ ಪ್ರಾಯೋಗಿಕವಾಗಿ ಶ್ರೀಪದ್ಧತಿಯನ್ನು ಬತ್ತದ ಸಸಿಗಳನ್ನು ಶಾಲಾ ಮಕ್ಕಳಿಂದ ನಾಟಿ ಮಾಡಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸುಧೀರ್ ಕುಮಾರ್ ಬಂಟ್ವಾಳ್ ಮಾತನಾಡಿದರು.
ನಬಾರ್ಡ್ ಜಿಲ್ಲಾ ಮುಖ್ಯ ಪ್ರಬಂಧಕ ರಾಘವೇಂದ್ರರ ಶಾಲಾ ಮಕ್ಕಳಿಗೆ ಸಸಿ ಮಡಿಯಿಂದ ಸಸಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಯೋಜನಾಧಿಕಾರಿ ಜಗದೀಶ ಅಲ್ಸೆ ತಾಲೂಕು ಕೃಷಿ ಅಧಿಕಾರಿ ಯೋಗೀಶ್, ಗ್ರಾಪಂ ಅಧ್ಯಕ್ಷ ಲೋಕೇಶ್ ಮತ್ತು ಒಕ್ಕೂಟಗಳ ಅಧ್ಯಕ್ಷ ಸತ್ಯನಾರಾಯಣ, ಶ್ರೀನಿವಾಸ, ಪ್ರಭಾಕರ, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಕೃಷ್ಣಮೂರ್ತಿ ಸ್ವಾಗತಿಸಿದರು. ಕೃಷ್ಣಪ್ಪ ವಂದಿಸಿದರು. ಆಯನೂರು ವಲಯದ ಮೇಲ್ವಿಚಾರಕ ದಿನೇಶ್ ಹೆಗ್ಡೆ ನಿರೂಪಿಸಿದರು.