ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಾರಿಗೆ ಸಿಬ್ಬಂದಿ ವಿಶ್ರಾಂತಿ ಕೊಠಡಿ ಸೌಲಭ್ಯ

Vishwanath S
Updated On : 15 Aug 2013, 11:44 am

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಆ.14
ಈಶಾನ್ಯ ಸಾರಿಗೆ ಸಂಸ್ಥೆಯು ಇತ್ತೀಚೆಗೆ ತನ್ನ ನೌಕರರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಕಾರ್ಮಿಕ ಬಾಂಧವ್ಯವನ್ನು ಕಾಪಾಡಿಕೊಂಡು ಸಂಸ್ಥೆಯಲ್ಲಿ ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಂಡಿದೆ. ಹೀಗೆಂದು ಹೇಳಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಸಂಸ್ಥೆಯ ಎಲ್ಲಾ ನಿಲ್ದಾಣ, ಬಸ್ ಘಟಕಗಳಲ್ಲಿ ಸಿಬ್ಬಂದಿ ವಿಶ್ರಾಂತಿ ಕೋಣೆ ಸೌಕರ್ಯ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆ. 14ರ ಬುಧವಾರ 'ಕನ್ನಡಪ್ರಭ' ಪತ್ರಿಕೆಯಲ್ಲಿ ಪ್ರಕಟವಾಗಿರುವ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ವರದಿಗೆ ಪ್ರತಿಕ್ರಿಯಿಸಿರುವ ಶಿವಮೂರ್ತಿ, ಸಾರಿಗೆ ಸಂಸ್ಥೆ ಉತ್ತರಿಸುವುದೆ? ಎಂದು ಕೇಳಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಯ ಪೂರ್ಣಪಾಠ ಹೀಗಿದೆ.
ಭದ್ರತಾ ಸಿಬ್ಬಂದಿ ಮೇಲೂ ಕ್ರಮ
1) ಸೇಡಂ ಘಟಕದ ಬಸ್ ಕಳುವಾಗಿರುವುದರ ಕುರಿತು ಈಗಾಗಲೇ ಕ್ರಮ ಕೈಕೊಳ್ಳಲಾಗಿದೆ. 25ರ ಜುಲೈ ತಿಂಗಳಲ್ಲಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ. ಅದೇ ರೀತಿ ಸಂಬಂಧಪಟ್ಟ ನೌಕರ, ಅಧಿಕಾರಿಗಳ ಅಲ್ಲದೇ ಜವಾಬ್ದಾರಿಯುತ ಭದ್ರತಾ ಸಿಬ್ಬಂದಿ ಮೇಲೂ ಶಿಸ್ತಿನ ಕ್ರಮ ಕೈಕೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ. ಸಂಸ್ಥೆಯ ಶಿಸ್ತು ಮತ್ತು ನಡತೆ ನಿಯಮಾವಳಿಯನ್ವಯ ಕ್ರಮ ಕೈಕೊಳ್ಳಲಾಗುವುದು. ಇದರಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ಯಾವುದೇ ಸಂದರ್ಭದಲ್ಲಿ ತೋರುವುದಿಲ್ಲ.
2)  ಸಿಬ್ಬಂದಿ ವಿಶ್ರಾಂತಿ ಕೋಣೆ ಸೌಕರ್ಯವನ್ನು ಈಗಾಗಲೇ ಸಂಸ್ಥೆಯಲ್ಲಿರುವ ಪ್ರತಿ ಘಟಕ, ಬಸ್ ನಿಲ್ದಾಣಗಳಲ್ಲಿಯೂ ಕಲ್ಪಿಸಲಾಗಿದೆ. ಅಲ್ಲದೇ ಗುಲ್ಬರ್ಗ ಕೇಂದ್ರ ಬಸ್ ನಿಲ್ದಾಣದಲ್ಲಿ ಹಳೆಯ ಕಟ್ಟಡದಲ್ಲಿ ಈಗಾಗಲೇ ಕಲ್ಪಿಸಲಾಗಿದೆ. ಆದರೆ ಇದನ್ನು ಕೇಂದ್ರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಸ್ಥಳಾಂತರಿಸಿ,  ನೂರು ಹಾಸಿಗೆಗಳ ವಿಶ್ರಾಂತಿ ಕೋಣೆಗಳನ್ನು ಸಕಲ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ಸದ್ಯದಲ್ಲೇ ಉದ್ಘಾಟನೆಯಾಗಬೇಕಾಗಿದೆ.
3) ಈಗಾಗಲೇ ಒಟ್ಟು 43 ಬಸ್ ಘಟಕಗಳ ಪೈಕಿ 37 ಬಸ್ ಘಟಕಗಳಲ್ಲಿ ಸಂಸ್ಥೆಯ ಸಿಬ್ಬಂದಿಗಳಿಗೆ ವಿಶ್ರಾಂತಿ ಕೊಠಡಿಗಳ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನುಳಿದ 6 ಸ್ಥಳಗಳಲ್ಲಿ ವಿಶ್ರಾಂತಿ ಕೊಠಡಿಗಳು ನಿರ್ಮಾಣದ ಹಂತದಲ್ಲಿವೆ.
4) ಎಲ್ಲಾ ಸಿಬ್ಬಂದಿ ವಿಶ್ರಾಂತಿ ಕೊಠಡಿಗಳನ್ನು ಇನ್ನೂ ಮೇಲ್ದರ್ಜೆಗೇರಿಸಲು ಒಟ್ಟು ಸಂಸ್ಥೆಯಲ್ಲಿ 270 ಮಂಚಗಳನ್ನು ಹಾಗೂ 890 ಹಾಸಿಗೆಗಳನ್ನು ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
5) ಸೇಡಂ ಬಸ್ ಕಳುವಾದ ಪ್ರಕರಣದ ಬಗ್ಗೆ ಸಂಸ್ಥೆಯಲ್ಲಿ ಪ್ರತ್ಯೇಕವಾದ ಭದ್ರತಾ ಮತ್ತು ಜಾಗ್ರತಾ ಇಲಾಖೆಯಿದ್ದು, ಈ ಇಲಾಖೆಯಡಿಯಲ್ಲಿ ಇಂತಹ ಪ್ರಕರಣಗಳಲ್ಲಿ ತನಿಖೆ ಕೈಕೊಂಡು ಅವಶ್ಯಕ ಕ್ರಮ ಕೈಕೊಳ್ಳುವ ವ್ಯವಸ್ಥೆ ಇರುತ್ತದೆ. ಪ್ರಕರಣದ ಸ್ವರೂಪ ಮತ್ತು ತನಿಖೆ ವರದಿಯ ಗಂಭೀರತೆಯ ಆಧಾರದ ಮೇಲೆ ಈ ಪ್ರಕರಣದಲ್ಲಿ ಆರಕ್ಷಕ ಇಲಾಖೆಗೂ ಸಹ ದೂರನ್ನು ನೀಡಲಾಗಿದೆ.
6) ಕರ್ತವ್ಯನಿರತ ವಸತಿ ಕಾರ್ಯಾಚರಣೆ ವಾಹನದ ಚಾಲಕ, ನಿರ್ವಾಹಕರಿಗೆ ವಿಶ್ರಾಂತಿ ಕೋಣೆಯ ಸೌಲಭ್ಯವನ್ನು ನೀಡಿದಾಗ್ಯೂ ಬಸ್‌ನ ಮೇಲೆ ಒಂದಿಷ್ಟು ನಿಗಾವಹಿಸುವುದು ಕರ್ತವ್ಯನಿರತ ಭದ್ರತಾ ಸಿಬ್ಬಂದಿ ಹೊಣೆಗಾರಿಕೆಯೂ ಇರುವುದರಿಂದ ಇವರುಗಳು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಲೆಂದು ಕೆಲವು ನೀತಿ, ನಿಯಮ, ಕಟ್ಟಳೆಗಳನ್ನು ರೂಪಿಸಲಾಗಿದೆಯೇ ಹೊರತು ಯಾವುದೇ ನೌಕರರಿಗೆ ಕಿರುಕುಳ ಧೋರಣೆ ಸಂಸ್ಥೆಯದ್ದಾಗಿರುವುದಿಲ್ಲ.
7) ಸಂಸ್ಥೆಯಲ್ಲಿ ಖಾಲಿ ಇರುವ ಚಾಲಕ 472, ಚಾಲಕ, ನಿರ್ವಾಹಕ-517, ಭದ್ರತಾ ರಕ್ಷಕ- 259, ತಾಂತ್ರಿಕ ಸಿಬ್ಬಂದಿ- 500. ಹೀಗೆ ಒಟ್ಟು 1,688 ನೌಕರರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು. ಆದರೆ ಹೈ.ಕ. ಹಿಂದುಳಿದ ಪ್ರದೇಶದ ವಿಶೇಷ ಸೌಲಭ್ಯ ಪರಿಚ್ಛೇದ 371(ಜೆ) ಅಡಿಯಲ್ಲಿ ನಿಯಮಾವಳಿಗಳು ರೂಪಿತವಾಗಿ ಇತ್ಯರ್ಥವಾಗಬೇಕಾಗಿದೆ. ಕಾರಣ ಈ ಎಲ್ಲಾ ಸಿಬ್ಬಂದಿ ನೇಮಕಾತಿಯನ್ನು ತಡೆಹಿಡಿಯಲಾಗಿದೆ. ಸಿಬ್ಬಂದಿಗಳ ಕೊರತೆ ಇರುವುದರಿಂದಲೂ ಇಂಥ ಘಟನೆಗಳಿಗೆ ಅವಕಾಶವಾಗಿದೆ.
8) ಮುಖ್ಯವಾಗಿ ನಮ್ಮ ಸಂಸ್ಥೆಯು ಹೈ. ಕ. ಭಾಗದ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿಂದ ಹೊರಬರುವ ನಿಟ್ಟಿನಲ್ಲಿ ಹಲವಾರು ವಿನೂತನ ಹೆಜ್ಜೆಗಳನ್ನಿಡುತ್ತಿದೆ. ಅದರಲ್ಲಿ ಈ ಭಾಗದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಬ್ಬಂದಿಗಳ ವಿಶ್ರಾಂತಿ ಕೋಣೆಗಳನ್ನೊಳಗೊಂಡಂತೆ ಸುಸಜ್ಜಿತವಾದ ಮತ್ತು ನವೀನ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬಸ್ ನಿಲ್ದಾಣಗಳನ್ನು ಪುನರ್ ನಿರ್ಮಿಸಲಾಗಿರುತ್ತದೆ.
9) ಸಂಸ್ಥೆಯು ತನ್ನ ನೌಕರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಸಂಸ್ಥೆಯ ಪ್ರಗತಿ ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುವ ಮಹತ್ವಾಕಾಂಕ್ಷೆಯಿಂದ ಮಾನವೀಯತೆ ಸೌಧದ ಮೇಲೆಯೇ ಸಂಸ್ಥೆಯನ್ನು ಕಟ್ಟಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement