ವಿದ್ಯಾರ್ಥಿಗೆ ಒಲಿಯಿತು ಎಸ್ಬಿಆರ್ ಧ್ವಜಾರೋಹಣದ ಯೋಗ
ಗುಲ್ಬರ್ಗ: ಇಲ್ಲಿನ ಪ್ರತಿಷ್ಠಿತ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಗಳ ಅಂಗಳದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ಈ ಬಾರಿ ಸಂಸ್ಥೆ ಅಧ್ಯಕ್ಷ, ದಾಸೋಹ ಪೀಠಾಧಿಪತಿಗಳು ಅನಿವಾರ್ಯ ಕಾರಣಗಲಿಂದಾಗಿ ಧ್ವಜರೋಹಣದಲ್ಲಿ ಭಾಗವಹಿಸರಿಲಿಲ್ಲ. ದಾಸೋಹ ಮನೆತನದವರೇ ಆಗಿರುವ ಬಸವರಾಜಪ್ಪ ಅಪ್ಪ ಅವರನ್ನು ಮುಖ್ಯ ಅತಿಥಿಯಾಗಿಸಿ ಧ್ವಜಾರೋಹಣಕ್ಕೆ ಸಂಸ್ಥೆಯವರು ನಿರ್ಣಯಿಸಿ ಆಹ್ವಾನ ನೀಡಿದ್ದರು.
ಆಹ್ವಾನ ಮನ್ನಿಸಿ ಸಮಾರಂಭಕ್ಕೆ ಬಸವರಾಜಪ್ಪ ಅಪ್ಪ ಆಗಮಿಸಿದ್ದರೂ ಸಹ ಅವರು ತಾವೇ ಮುಂದಾಗಿ ಧ್ವಜಾರೋಹಣ ಮಾಡದೆ ಅಲ್ಲೇ ಇದ್ದ ಸಂಸ್ಥೆಯ ವಿದ್ಯಾರ್ಥಿಯೋರ್ವನಿಗೆ ಕರೆದು ಆ ಅವಕಾಶ ನೀಡಿದರು. ಕಿವಿಗಡಚಿಕ್ಕುವ ಕರತಾಡನದಲ್ಲಿ ಧ್ವಜಾರೋಹಣ ನೆರವೇರಿತು. ತಮ್ಮ ಮಾತುಗಳಲ್ಲಿ ಈ ಸಂಗತಿ ಪ್ರಸ್ತಾಪಿಸಿದ ಬಸವರಾಜಪ್ಪ ಅಪ್ಪ ಯುವಕರೇ ದೇಶದ ಪಾಲಕರು. ಹಿರಿಯರಿಂದಲೇ ಧ್ವಜ ವಂದನೆ ಎಂಬ ಸೂತ್ರ ಬೇಡ. ಅದಕ್ಕೇ ತಾವು ಯುವಕರಿಗೆ ಇಲ್ಲಿ ಪ್ರಾಶಸ್ತ್ಯ ನೀಡಿದ್ದಾಗಿ ಹೇಳಿದರು.
ಯುವಕರಿಗೆ ಕರೆ: ಭಾರತ ದೈವಿಶಕ್ತಿಯ ನಾಡು, ಪ್ರಪಂಚವೇ ಈ ದೇಶವನ್ನು ಧನ್ಯತಾ ಭಾವನೆಯಿಂದ ಕಾಣುತ್ತಿದೆ. ದೇವರೇ ನೆಲೆ ನಿಂತಿರುವ ನಾಡಿದು ಎಂದು ದೇಶದ ಹಿರಿಮೆ- ಗರಿಮೆ ಸಾರಿದ ಬಸವರಾಜಪ್ಪ ಅಪ್ಪ ಉನ್ನತ ಶಿಕ್ಷಣ ತಮ್ಮದಾಗಿಸಿಕೊಂಡು ಸಚ್ಚಾರಿತ್ರ್ಯವಿರುವಂತಹ ಪ್ರಜೆಗಳಾಗಿ ದೇಶವನ್ನು ರಕ್ಷಿಸುವಂತೆ ಯುವಕರಿಗೆ ಕರೆ ನೀಡಿದರು.
ಅಪ್ಪಾ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಅನೀಲಕುಮಾರ್ ಬಿಡವೆ, ಶರಣಬಸವೇಶ್ವರ ಎಂಟಿಎ ಕಾಲೇಜಿನ ವಾಣಿಶ್ರೀ ಬಿರಾದಾರ್, ಎಸ್ಬಿಆರ್ ಪ್ರಾಚಾರ್ಯ ಎನ್.ಎಸ್. ದೇವರಕಲ್ ಸರ್, ಶಾರದಾ ಮೇಡಂ, ಮಾಂಟೆಸ್ಸೋರಿ ವಿಭಾಗದ ಹಿರಿಯ ಶಿಕ್ಷಕಿಯರಾದ ಪುಷ್ಪಾ, ನಂದಾ ಮೇಡಂ ಮತ್ತವರ ತಂಡ, ಕನ್ಯಾಶಾಲೆಯ ಅನೀಲಕುಮಾರ್ ಸರ್, ಉಪನ್ಯಾಸಕ ಶರಣಗೌಡ, ಡಾ. ಶಿವರಾಜಶಾಸ್ತ್ರೀ ಹೆರೂರ್, ಡಾ. ಎಂಎಸ್ ಜೋಗದ್, ಡಾ. ವೆಂಕಟರೆಡ್ಡಿ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ವರ್ಗದ ವಿದ್ಯಾರ್ಥಿಗಳು ಭಾಗವಹಿಸಿರುವ ಪಥ ಸಂಚಲನ ಆಕರ್ಷಕವಾಗಿ ನಡೆಯಿತು.
. ಶಾಲೆಯ ಸಾವಿರಾರು ವಿದ್ಯಾರ್ಥಿಗಳು ತಮ್ಮ ಸಮವಸ್ತ್ರ ಧರಿಸಿ ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತಮ್ಮ ಮಕ್ಕಳ ಹಾಡು- ಕುಣಿತ ನೋಡಲು, ಕರಾಟೆ- ಯೋಗವಿದ್ಯೆಗಳ ಪ್ರದರ್ಶನಕ್ಕೆ ಸಾಕ್ಷಿಯಾಗಲು ಶರಣಬಸವೇಶ್ವರ ಕಾಲೇಜು ಮೈದಾನದಲ್ಲಿ ಪಾಲಕರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.