24ರಂದು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ , ಸುರಪುರ , ಆ.16
ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಆ.24ರಂದು ಯಾದಗಿರಿಯಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನವನ್ನು ಯಶಸ್ವಿ ಹಾಗೂ ಸ್ಮರಣೀಯವಾಗಿಸಲು ಜಿಲ್ಲೆಯ ಸಾಹಿತಿಗಳು, ಪ್ರಗತಿಪರ ಚಿಂತಕರು, ಸಮಾಜ ಸೇವಕರು, ರಾಜಕಾರಣಿಗಳು ಸಹಕರಿಸಬೇಕೆಂದು ಚುಟುಕು ಸಾಹಿತ್ಯ ಪರಿಷತ್ ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಕೋರಿದರು.
ಇಲ್ಲಿನ ಗರುಡಾದ್ರಿ ಕಲಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಲ್ಬರ್ಗ ಹಾಗೂ ಯಾದಗಿರಿ ಎರಡು ಜಿಲ್ಲೆಗಳಲ್ಲಿ ಇದುವರೆಗೂ ಜಿಲ್ಲಾ ಮಟ್ಟದ ಚುಟುಕು ಸಮ್ಮೇಳನ ಆಯೋಜಿಸಿರಲಿಲ್ಲ. ಇದು ಪ್ರಥಮ ಬಾರಿಗೆ ಸಮ್ಮೇಳನ ಆಯೋಜಿಸಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ ಎಂದರು.
ಸರ್ಕಾರದ ಧನಸಹಾಯವಿಲ್ಲ: ಸರ್ಕಾರದ ಅಂಗ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ಗಳು ನಡೆಸುವ ಸಮ್ಮೇಳನಗಳಿಗೆ ಸರ್ಕಾರ ಸಾಕಷ್ಟು ಅನುದಾನ ಒದಗಿಸುತ್ತದೆ. ಜಿಲ್ಲಾ ಸಾಹಿತ್ಯ ಪರಿಷತ್ ಆಯೋಜಿಸುವ ಜಿಲ್ಲಾ ಸಮ್ಮೇಳನದ ಪೂರ್ವವೇ ಸರ್ಕಾರದ ಸಹಾಯಧನವಿಲ್ಲದೆ ಸ್ವತಂತ್ರವಾಗಿ ನಮ್ಮ ಪರಿಷತ್ ಜಿಲ್ಲಾ ಸಮ್ಮೇಳನ ಆಯೋಜಿಸಿರುವುದು ಹೆಮ್ಮೆಯ ವಿಷಯ ಎಂದರು.
ಸಮ್ಮೇಳನವನ್ನು ಸುರಪುರದಲ್ಲಿಯೇ ಆಯೋಜಿಸುವ ಗುರಿ ಹೊಂದಲಾಗಿತ್ತು. ಆದರೆ ಇದು ಪ್ರಥಮ ಸಮ್ಮೇಳನವಾಗಿದ್ದರಿಂದ ಜಿಲ್ಲಾ ಕೇಂದ್ರಸ್ಥಾನದಲ್ಲಿ ಮಾಡುವುದು ಸೂಕ್ತವೆಂದು ನಿರ್ಧರಿಸಲಾಯಿತು. ಯಾದಗಿರಿ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಆ. 24ರಂದು ಬೆಳಗ್ಗೆ ರಾಷ್ಟ್ರ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಭವ್ಯ ಮೆರವಣಿಗೆ: ಸಮ್ಮೇಳನದ ಅಂಗವಾಗಿ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಜಿಪಂ ಸದಸ್ಯೆ ಮರೆಮ್ಮ ಶಾಣ್ಯಾನೋರ್ ಮೆರವಣಿಗೆ ಉದ್ಘಾಟಿಸುವರು. ಜಿಪಂ ಹಂಗಾಮಿ ಅಧ್ಯಕ್ಷ ಶರಣಿಕಕುಮಾರ ದೋಖಾ ಭಾಗವಹಿಸುವರು. ಸುರಪುರ, ಶಹಾಪುರ. ಗುರುಮಿಠಕಲ್ ಕಲಾ ತಂಡಗಳು, ಜಾನಪದ ನೃತ್ಯ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಲಿವೆ.
ಗೋಷ್ಠಿಗಳು: ಸಮ್ಮೇಳನ ವೇದಿಕೆಗಳಿಗೆ ಸಗರನಾಡಿನ ಹೆಸರಾಂತ ಚುಟುಕು ಸಾಹಿತಿ ದಿ. ಗುರುಬಸಯ್ಯ ಅಮ್ಮಾಪುರ ಹಾಗೂ ಪತ್ರಕರ್ತ ದಿ. ಲಿಂಗಣ್ಣ ಸತ್ಯಂಪೇಟೆ ಹೆಸರಿಡಲಾಗಿದೆ. ದಿ. ವಿಶ್ವನಾಥರಡ್ಡಿ ಮುದ್ನಾಳ ಸ್ಮಾರಕವಾಗಿ ಮಹಾದ್ವಾರ ಸ್ಥಾಪಿಸಲಾಗಿದೆ. ಸಮ್ಮೇಳನದಲ್ಲಿ ಒಟ್ಟು ನಾಲ್ಕು ಗೋಷ್ಠಿ ಮತ್ತು ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಸುಮಾರು 50ಕ್ಕೂ ಹೆಚ್ಚು ಚುಟುಕು ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನದ ಗೌರವಾಧ್ಯಕ್ಷ ಸಿದ್ದರಾಮ ಹೊನ್ಕಲ್ ಅವರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಚಿಂಚನಸೂರ್ ಸಮ್ಮೇಳನ ಉದ್ಘಾಟನೆ: ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನದ ತೋಟೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ದೇವಪುರದ ಶಿವಮೂರ್ತಿ ಶಿವಾಚಾರ್ಯರು ನೇತೃತ್ವ ವಹಿಸುವರು. ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ್ ಸಮ್ಮೇಳನ ಉದ್ಘಾಟಿಸುವರು. ಶಾಸಕ ಡಾ. ಎ.ಬಿ. ಮಾಲಕರಡ್ಡಿ ಪುಸ್ತಕ ಬಿಡುಗಡೆ ಮಾಡುವರು ಎಂದು ತಿಳಿಸಿದರು.
ಸಮ್ಮೇಳನ ಲೋಪದೋಷವಾಗದಂತೆ ಅಚ್ಚುಕಟ್ಟಾಗಿ ನಡೆಸಲು ಮೆರವಣಿಗೆ ಸಮಿತಿ, ಪ್ರಚಾರ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಮಹಿಳಾ ಸಮಿತಿ, ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾದ್ಯಂತ ಸಾಹಿತ್ಯಾಸಕ್ತರನ್ನು ಗುರುತಿಸಿ ಸಮಿತಿಗಳಿಗೆ ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ರಾಜ್ಯದ ಹೆಸರಾಂತ ಸಾಹಿತಿಗಳಿಂದ ಉಪನ್ಯಾಸ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಹಾಪುರ, ಸುರಪುರ ಶಾಸಕರು, ಸಾಹಿತಿಗಳು, ಪ್ರಗತಿಪರ ಚಿಂತಕರು, ವಿವಿಧ ರಾಜಕೀಯ ಪಕ್ಷಗಳ ಧುರೀಣರು, ರೈತಪರ ಮುಖಂಡರು, ಜನಪ್ರತಿನಿಧಿಗಳು, ಸಮಾಜ ಸೇವಕರು, ಜಾನಪದ ಕಲಾವಿದರು, ಆಕಾಶವಾಣಿ, ದೂರದರ್ಶನ ಸಂಗೀತಗಾರರು ಸೇರಿದಂತೆ ಹಲವರು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಲಿದ್ದಾರೆ ಎಂದು ನಾಯಕ ವಿಶ್ವಾಸ ವ್ಯಕ್ತಪಡಿಸಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜ ಸಿನ್ನೂರ್, ಜಿಲ್ಲಾ ಪ್ರಧಾನ ಸಂಚಾಲಕ ಅಮರಯ್ಯಸ್ವಾಮಿ ಜಾಲಿಬೆಂಚಿ, ತಾಲೂಕಾಧ್ಯಕ್ಷ ಶಿವಶರಣಪ್ಪ ಶಿರೂರ್, ಬಸವರಾಜ ಜಮದ್ರಖಾನಿ, ಮಡಿವಾಳಪ್ಪ ಪಾಟೀಲ್, ಬೀರಣ್ಣ ಬಿಕೆ ಆಲ್ದಾಳ್, ವೆಂಕಟೇಶ ಅನ್ವಾರ್, ಮಲ್ಲು ಬಾದ್ಯಾಪುರ, ಲಕ್ಷ್ಮಣ ಗುತ್ತೇದಾರ್, ಧರ್ಮಣ್ಣ ಬಡಿಗೇರ್ ಇದ್ದರು.