ಗುವಿವಿ; ಅಧ್ಯಯನ ವಿಭಾಗಗಳಲ್ಲೇ ಕೌನ್ಸೆಲಿಂಗ್
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.16
ಇಲ್ಲಿನ ಜ್ಞಾನಗಂಗೆ ತನ್ನ 48 ಸ್ನಾತಕೋತ್ತರ, ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ಗಳಿಗೆ 2013-14ನೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪದ್ಧತಿಯಲ್ಲಿ ಬದಲಾವಣೆ ಮಾಡಿದೆ. ಮೊದಲೆಲ್ಲಾ ಪ್ರವೇಶಕ್ಕಾಗಿ ಕೇಂದ್ರೀಕೃತ ಕೌನ್ಸೆಲಿಂಗ್ ನಡೆಸಲಾಗುತ್ತಿತ್ತು. ಆದರೆ ಈ ಶೈಕ್ಷಣಿಕ ವರ್ಷದಿಂದ ಆಯಾ ಅಧ್ಯಯನ ವಿಭಾಗಗಳಲ್ಲಿನ ಲಭ್ಯ ಸೀಟುಗಳನ್ನಾಧರಿಸಿ ಪ್ರವೇಶ ಪ್ರಕ್ರಿಯೆ ನಡೆಸಲು ವಿಶ್ವವಿದ್ಯಾಲಯ ಮುಂದಾಗಿದೆ.
2013-14ನೇ ಶೈಕ್ಷಣಿಕ ಸಾಲಿಗೆ 48 ಸ್ನಾತಕೋತ್ತರ, ಪಿಜಿ ಡಿಪ್ಲೋಮಾಗಳಿಗೆ ಪ್ರವೇಶ ಬಯಸಿ 8,681 ಅರ್ಜಿಗಳು ಬಂದಿವೆ. ಇವುಗಳನ್ನೆಲ್ಲ ಪರಾಮರ್ಶಿಸಲಾಗುತ್ತಿದೆ. ರೆಗ್ಯುಲರ್ ಕೋಟಾ, ಸ್ಪೆಷಲ್ ಕೆಟಗರಿ ಹಾಗೂ ಪೇಮೆಂಟ್ ಕೋಟಾ(ಸೆಲ್ಪ್ ಸಪೋರ್ಟಿಂಗ್ ಸ್ಕೀಂ) ಎಂದು ಮೂರು ಹಂತಗಳಲ್ಲಿ ಆಗಸ್ಟ್ 19ರಿಂದ 22ರವರೆಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದು ಗುಲ್ಬರ್ಗ ವಿವಿ ಕುಲಪತಿ ಡಾ. ಈ.ಟಿ. ಪುಟ್ಟಯ್ಯ ಹಾಗೂ ಕುಲಸಚಿವ ಡಾ. ದಯಾನಂದ ಅಗಸರ್ ತಿಳಿಸಿದ್ದಾರೆ.
ಆ.19ರಿಂದ ಪ್ರವೇಶ ಪ್ರಕ್ರಿಯೆ: ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೇಶಕ್ಕೆ ಆಯ್ಕೆಯಾದಂತಹ ವಿದ್ಯಾರ್ಥಿಗಳ ಮೆರಿಟ್ ಹಾಗೂ ರೋಸ್ಟರ್ ನಿಯಮಗಳಡಿಯಲ್ಲಿ ಸಿದ್ಧಪಡಿಸಿರುವ ಪ್ರವೇಶ ಪಟ್ಟಿಯನ್ನು ಆ.19ರಂದು ವಿವಿ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಆಯ್ಕೆ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು, ರೆಗ್ಯುಲರ್, ಸ್ಪೆಷಲ್ ಹಾಗೂ ವಿವಿ ಕೋಟಾದಡಿಯಲ್ಲಿ ಆಯ್ಕೆಯಾದವರೆಲ್ಲರೂ ತಮ್ಮ ಮೂಲ ದಾಖಲೆ ಪತ್ರಗಳ ಸಮೇತ ನಿಗದಿತ ಶುಲ್ಕ ಸಂದಾಯ ಮಾಡಿ ಸಂಬಂಧಿತ ವಿಭಾಗಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಸ್ನಾತಕೋತ್ತರ ಕೇಂದ್ರಗಳಾದ ಬೀದರ್, ರಾಯಚೂರು ಹಾಗೂ ಬಸವಕಲ್ಯಾಣದಲ್ಲಿಯೂ ಕೋರ್ಸ್ಗಳನ್ನು ಹೊಂದಿರುವ ಎಲ್ಲಾ ಸರ್ಕಾರಿ ಮಹಾವಿದ್ಯಾಲಯಗಳಲ್ಲಿಯೂ ಕೂಡಾ ಪ್ರವೇಶಕ್ಕೆ ಆಯ್ಕೆಯಾದ ಪ್ರಥಮ ಪಟ್ಟಿಯ ವಿದ್ಯಾರ್ಥಿಗಳು ಆ.19ರಿಂದ ಪ್ರವೇಶ ಪಡೆಯಬಹುದಾಗಿದೆ.
ಇದಲ್ಲದೆ ಉಳಿದ ಕೋರ್ಸ್ಗಳಲ್ಲಿ ಖಾಲಿ ಇರುವ ಸೀಟುಗಳಿಗಾಗಿ, ಕೌನ್ಸೆಲಿಂಗ್ ಪ್ರಕ್ರಿಯೆ ಆಗಸ್ಟ್ 23ರಿಂದ ಪ್ರಾರಂಭವಾಗಲಿದೆ. ಆ.23ರಂದು ಎಂಸಿಎ ಮತ್ತು ಎಂಬಿಎ, ಸಸ್ಯಶಾಸ್ತ್ರ ವಿಭಾಗ ಹಾಗೂ ಕ್ರೀಡಾ ಕಟ್ಟಡಗಳಲ್ಲಿ ಬೆಳಗ್ಗೆ 10ಕ್ಕೆ ಕೌನ್ಸೆಲಿಂಗ್ ನಡೆಯಲಿದೆ.
ಕೌನ್ಸೆಲಿಂಗ್: ರಾಯಚೂರು ಹಾಗೂ ಬೀದರ್ ಸ್ನಾತಕೋತ್ತರ ಕೇಂದ್ರಗಳಲ್ಲಿ ಆ.26ರಂದು, ಎಲ್ಲ ಸರ್ಕಾರಿ ಮಹಾವಿದ್ಯಾಲಯಗಳಲ್ಲಿರುವ ಸ್ನಾತಕೋತ್ತರ ಕೋರ್ಸ್ಗಳಿಗಾಗಿ ಆ.27ರಂದು ಗುಲ್ಬರ್ಗ, ಬೀದರ್ ಹಾಗೂ ರಾಯಚೂರು ಕೇಂದ್ರಗಳಲ್ಲಿ ಸ್ವಯಂ ಅವಲಂಬಿತ ಯೋಜನೆಯಡಿಯಲ್ಲಿ ಪ್ರವೇಶಕ್ಕಾಗಿ ಆ.28ರಂದು ಕೌನ್ಸೆಲಿಂಗ್ ನಡೆಯಲಿದೆ. ಎಲ್ಲಾ ಹಂತದಲ್ಲಿನ ಪ್ರವೇಶಾತಿಗಳು ಪೂರ್ಣಗೊಂಡ ಮೇಲೂ ಉಳಿಯುವ ಸೀಟುಗಳಿಗಾಗಿ ಗುಲ್ಬರ್ಗ ವಿವಿ ಸೇರಿದಂತೆ ಎಲ್ಲಾ ಪಿಜಿ ಕೇಂದ್ರಗಳು, ಸರ್ಕಾರಿ ವಿದ್ಯಾಲಯಗಳಲ್ಲಿ ಆ.30ರಂದು ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ಕುಲಪತಿ ಡಾ. ಪುಟ್ಟಯ್ಯ ಹೇಳಿದ್ದಾರೆ.
ವಿದ್ಯಾರ್ಥಿಗಳು ಯಾವ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚು ಮಂಡಿಸುವರೋ ಅಂತಹ ಕೋರ್ಸ್ಗಳ ಪ್ರವೇಶ ಸಂಖ್ಯೆಯಲ್ಲಿ ಬೇಡಿಕೆ ಹಾಗೂ ಮೂಲ ಸೌಕರ್ಯಗಳಿಗೆ ತಕ್ಕಂತೆ ಅಗತ್ಯ ಮಾರ್ಪಾಟು ಮಾಡಲಾಗುತ್ತದೆ. ಸಿಂಡಿಕೇಟ್ನ ನಿರೀಕ್ಷಿತ ಅನುಮತಿಯೊಂದಿಗೆ ಶೇ.10ರಿಂದ ಶೇ.15ರಷ್ಟು ಸೀಟುಗಳನ್ನು ಹೆಚ್ಚಳ ಮಾಡುವ ಅಧಿಕಾರ ತಾವು ಹೊಂದಿರುವುದಾಗಿ ಡಾ. ಪುಟ್ಟಯ್ಯ ತಿಳಿಸಿದ್ದಾರೆ.
ಪಾರದರ್ಶಕತೆಗೆ ಗಮನ: ಖಾಸಗಿ ಕಾಲೇಜುಗಳಲ್ಲಿ 2,080 ಸೀಟುಗಳು ಲಭ್ಯವಿದ್ದು ಈ ಪೈಕಿ ಶೇ.50ರಷ್ಟು ವಿವಿ ಸೀಟುಗಳಾಗಿದ್ದರೆ. ಇನ್ನುಳಿದ ಶೇ.50ರಷ್ಟು ಸೀಟುಗಳು ಆಡಳಿತ ಮಂಡಳಿ ವಿವೇಚನೆಗೆ ಬಿಟ್ಟಿದ್ದಾಗಿರುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ 1,300 ಸೀಟುಗಳು ಲಭ್ಯ ಇವೆ. ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ 3,380 ಸೀಟುಗಳಿವೆ. ರಾಯಚೂರು ಸ್ನಾತಕೋತ್ತರ ಕೇಂದ್ರದಲ್ಲಿ 215 ಸೀಟುಗಳು ಲಭ್ಯವಿವೆ. ಆಯಾ ಅಧ್ಯಯನ ವಿಭಾಗದಲ್ಲಿ ಲಭ್ಯವಿರುವ ಸೀಟುಗಳು, ಪ್ರವೇಶ ಇತ್ಯಾದಿ ವಿಚಾರಗಳಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಹೋಗಲಾಗುತ್ತಿದೆ. ಯಾವ ಹಂತದಲ್ಲಿಯೂ ಮುಚ್ಚುಮರೆ ಮಾಡಲಾಗದು. ಪ್ರವೇಶ ಸಂಪೂರ್ಣ ಪಾರದರ್ಶಕವಾಗಿರಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ 1 ಕೋಟಿ ಸಂದಾಯ: ಸೆಲ್ಪ್ ಸಪೋರ್ಟಿಂಗ್ ಯೋಜನೆಯಡಿಯಲ್ಲಿ ಕಳೆದ ಶೈಕ್ಷಣಿಕ ವರ್ಷ ವಿವಿಗೆ 1 ಕೋಟಿ ಶುಲ್ಕ ರೂಪದಲ್ಲಿ ಸಂದಾಯವಾಗಿದೆ. ವಿವಿ ಅಭಿವೃದ್ಧಿ, ನಿರ್ವಹಣೆ ಅನುದಾನದಲ್ಲಿ ಸರ್ಕಾರ ವಾರ್ಷಿಕ ಖೋಟಾ ಮಾಡುತ್ತಲೇ ಹೊರಟಿದ್ದರಿಂದ ವಿವಿ ಅನಿವಾರ್ಯವಾಗಿ ಸೆಲ್ಪ್ ಸಪೋರ್ಟಿಂಗ್ ಸ್ಕಿಂಗೆ ಪ್ರೋತ್ಸಾಹಿಸಬೇಕಾಗಿ ಬಂದಿದೆ. ಆದಾಗ್ಯೂ ರೆಗ್ಯುಲರ್ ಕೋಟಾದ ಜೊತೆ ಜೊತೆಗೇ ಸೆಲ್ಪ್ ಸಪೋರ್ಟಿಂಗ್ ಸ್ಕಿಂ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಿರುತ್ತದೆ. ಪ್ರವೇಶಾತಿ ವಿವರಗಳನ್ನು ವೆಬ್ಸೈಟ್- ಢಿಢಿಢಿ.್ಜ್ಡಟಛಿಛ್ಠ್ಜಛ್ಡಟ್ಝಿಢಜ್ಠಡ್ಝಡಿಣ.್ಞಛ್ಠ.ಟ್ಝ್ಛಿ.್ಝಟಿ ಪಡೆಯಬಹುದು ಎಂದು ಕುಲಪತಿ ಡಾ. ಪುಟ್ಟಯ್ಯ ಹೇಳಿದ್ದಾರೆ.
ಕರ್ನಾಟಕದ ಇತರೆ ವಿವಿಗಳಿಂದ ಪ್ರವೇಶ ಬಯಸುವವರು ಹಾಗೂ ಅನ್ಯ ರಾಜ್ಯಗಳಿಂದ ಗುಲ್ಬರ್ಗ ವಿವಿಗೆ ಪ್ರವೇಶ ಬಯಸುವವರಿಗೆ ನಿಯಮಗಳ ಅನ್ವಯ ಮೀಸಲಾತಿ ನೀಡಲಾಗುತ್ತದೆ ಎಂದೂ ಕುಲಸಚಿವ ಡಾ. ಅಗಸರ್ ಸ್ಪಷ್ಟಪಡಿಸಿದ್ದಾರೆ. ಪ್ರವೇಶ ಸಮಿತಿಯ ಅಧ್ಯಕ್ಷ ಡಾ. ಗಡ್ಡದ್, ಹಣಕಾಸು ಅಧಿಕಾರಿಗಳು, ಕುಲಸಚಿವ(ಮೌಲ್ಯಮಾಪನ) ಡಾ. ಶರಣಪ್ಪ ಹಲ್ಸೆ ಸುದ್ದಿಗೋಷ್ಠಿಯಲ್ಲಿದ್ದರು.