ಯೋಜನೆಗಳ ಸಮರ್ಪಕ ಜಾರಿಗೆ ತರಬೇತಿ ಅಗತ್ಯ
ಯಾದಗಿರಿ: ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿ ವರ್ಗಕ್ಕೆ ಸೂಕ್ತ ತರಬೇತಿ ನೀಡಿದಾಗ ಮಾತ್ರ ಯೋಜನೆಗಳು ಸಮರ್ಪಕ ಅನುಷ್ಠಾನವಾಗಲು ಸಾಧ್ಯ ಎಂದು ಜಿಪಂ ಅಧ್ಯಕ್ಷ ಶರಣಿಕಕುಮಾರ ದೋಖಾ ಹೇಳಿದರು.
ಇಲ್ಲಿನ ತಾಪಂ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಾಮರ್ಥ್ಯಸೌಧ ಕಟ್ಟಡ ಮತ್ತು ತಾಪಂ ನವೀಕರಣ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
ಸುಸಜ್ಜಿತ ಕಟ್ಟಡ- ಸಂತಸ: ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಚುರಪಡಿಸಲು ನೌಕರರಿಗೆ ತರಬೇತಿಗಳು ಅವಶ್ಯ. ಅವುಗಳನ್ನು ನೀಡಲು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿರುವುದು ಅತ್ಯಂತ ಸಂತಸದ ಸಂಗತಿ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿಗೆ ವಿವಿಧ ಯೋಜನೆ: ಜಿಪಂ ಸಿಇಒ ಎಸ್.ಎ. ಜಿಲಾನಿ ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದಕ್ಕೆ ತರಬೇತಿಗಳು ಅವಶ್ಯ. 36 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸಾಮರ್ಥ್ಯಸೌಧದ ಕಟ್ಟಡ ಉದ್ಘಾಟನೆಗೆ ಸ್ವಲ್ಪ ವಿಳಂಬವಾದರೂ, ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಈ ಕಟ್ಟದಲ್ಲಿ ತರಬೇತಿ ಪಡೆಯಲು ಬರುವ ಜನತೆಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು. ತಾಪಂ ಅದ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಕಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರ, ಸದಸ್ಯ ಬಸವರಾಜ ಖಂಡ್ರೆ, ಶ್ಯಾಮಲಾ, ತಾಪಂ ಸದಸ್ಯರಾದ ಸಾವಿತ್ರಿ, ಹಣಂಮತ ಲಿಂಗೇರಿ, ಸಣ್ಣ ಹಣಮಂತಪ್ಪ ಬಳಿಚಕ್ರ, ಸಿದ್ದಪ್ಪ ಲಿಂಗೇರಿ ಇತರರು ಇದ್ದರು.