ಕುಷ್ಠ ರೋಗಿಗಳ ಕಾಲನಿಗೆ ಸಂಕಷ್ಟ
ಕನ್ನಡಪ್ರಭ ವಾರ್ತೆ ಯಾದಗಿರಿ ಆ.17
ಎಲ್ಲರಂತೆ ಬಾಳಿ ಬದುಕಲಿ ಎಂಬ ಸದಾಶಯದಿಂದ ಕುಷ್ಠ ರೋಗಿಗಳಿಗೆಂದೇ ಪ್ರತ್ಯೇಕ ಕಾಲನಿ ನಿರ್ಮಿಸಿಕೊಟ್ಟ ಸರ್ಕಾರ ಅಷ್ಟೇ ವೇಗವಾಗಿ ಅವರನ್ನು ಮರೆತಿದೆ. ಇದರಿಂದ ಈ ಕಾಲನಿಯಲ್ಲಿರುವ ಸುಮಾರು 50 ಜನರಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಭಿಕ್ಷೆ ಬೇಡಿ ಬದುಕುತ್ತಿರುವ ಈ ಕುಟುಂಬಗಳಿಗೆ ತಾವು ವಾಸಿಸುತ್ತಿರುವ ಕಾಲನಿಯಲ್ಲಿನ ಅವ್ಯವಸ್ಥೆ ಎನ್ನುವುದು ಕುಷ್ಠ ರೋಗಕ್ಕಿಂತ ಹೆಚ್ಚಾಗಿ ಕಾಡುತ್ತಿದೆ.
ನಗರದಿಂದ 2 ಕಿಮೀ ದೂರದಲ್ಲಿ ಕುಷ್ಠರೋಗಿಗಳ ಕಾಲನಿಯೊಂದಿದೆ. ನಗರದ ಮಧ್ಯೆ ಇದ್ದೂ ಇವರು ಅರಣ್ಯದಲ್ಲಿ ಇದ್ದಂತಿದ್ದಾರೆ. ಕಾರಣ ಈ ಕಾಲನಿ ಇರುವುದೇ ಗೋಚರಕ್ಕೆ ಬಾರದಂತಾಗಿದೆ. ಸುತ್ತ ಆಳೆತ್ತರಕ್ಕೆ ಮುಳ್ಳಿನ ಗಂಟಿ ಬೆಳೆದು ನಿಂತಿದೆ. ರಸ್ತೆ ಹೋಗಲಿ, ನಡೆದಾಡುವ ದಾರಿ ಕೂಡ ಮುಚ್ಚಿಹೋಗಿದೆ. ಆದ್ದರಿಂದ ಈ ಕುಷ್ಠ ರೋಗಿಗಳ ಕಾಲನಿ ಸಂಬಂಧಪಟ್ಟ ಇಲಾಖೆಗಳ ಕಣ್ಣಿಗೆ ಬೀಳುತ್ತಿಲ್ಲ. ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಕಚೇರಿಗೆ ಎಡತಾಕುತ್ತಿದ್ದರೂ ಅವರ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ.
ಯಾವುದೂ ಸರಿಯಿಲ್ಲ: ಕುಷ್ಠ ರೋಗಿಗಳಿಗೆಂದು ಈ ಕಾಲನಿಯಲ್ಲಿ 40 ಆಶ್ರಯ ಮನೆ ನಿರ್ಮಿಸಿಕೊಡಲಾಗಿದೆ. ಆದರೆ ಅವು ಈಗ ಶಿಥಿಲಾವಸ್ಥೆ ತಲುಪಿದೆ. ಕಿಟಕಿ, ಬಾಗಿಲು ಮುರಿದು ಬಿದ್ದಿದೆ. ಚಾವಣಿ ಹಾರಿಹೋಗಿದೆ. ಭಿಕ್ಷೆ ಬೇಡಿ ತಿನ್ನುವ ಜನರ ಮನೆಯ ಸಾಮಗ್ರಿಗಳನ್ನೂ ಕಳ್ಳತನ ಮಾಡಲಾಗಿದೆ.
ಒಂದು ಕಾಲದಲ್ಲಿ ವಿದ್ಯುತ್ ಸಂಪರ್ಕ ಇತ್ತು ಎನ್ನುವು ಕುರುಹಿಗೆ ಅಲ್ಲಿ ಕಂಬಗಳು ಇದ್ದರೂ ಇವರು ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ದಿನ ಬೆಳಗಾದರೆ ಎಲ್ಲಾದರೂ ಭಿಕ್ಷೆ ಬೇಡಲು ಹೋಗುವ ಈ ಜನರು ತಮ್ಮ ವಾಸಸ್ಥಾನಕ್ಕೆ ಹೋಗಲು ಪರದಾಡುತ್ತಿದ್ದಾರೆ. ದೂರದಲ್ಲಿರುವ ಬೋರ್ವೆಲ್ ಮಾತ್ರ ಇವರ ದಣಿವಾರಿಸುತ್ತಿದೆ. ಮನೆಗಿಂತ ಎತ್ತರಕ್ಕೆ ಮುಳ್ಳಿನ ಗಂಟಿಗಳು ಬೆಳೆದು ಇಡೀ ಕಾಲನಿಯೇ ಮುಚ್ಚಿಹೋಗಿದೆ. ಇವರ ಮನೆಗಳು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ.
ಸೌಲಭ್ಯವೂ ಇವರತ್ತ ಸುಳಿದಿಲ್ಲ: ಸರ್ಕಾರ ಅಬಲರಿಗೆ ಅನೇಕ ಸೌಲಭ್ಯ ನೀಡುತ್ತಿದೆಯಾದರೂ ಇವರತ್ತ ಸುಳಿದಿಲ್ಲ. ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ, ಅವರ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಈ ಕುಷ್ಠ ರೋಗಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ವೃದ್ಧಾಪ್ಯದಿಂದ ಅನೇಕರು ಮನೆಯಿಂದ ಹೊರಬರಲಾರದಷ್ಟು ಬಳಲಿದ್ದಾರೆ. ಅನೇಕರು ಅಲ್ಲೇ ಜೀವ ತ್ಯಜಿಸಿದ್ದಾರೆ. ಅವರಲ್ಲಿ ಅನೇಕರಿಗೆ ಚಿಕ್ಕ ಮಕ್ಕಳಿದ್ದಾರೆ. ಆದರೆ ಈ ಕುಷ್ಠ ರೋಗಿಗಳನ್ನು ಸರ್ಕಾರ ಅಸ್ಪೃಶ್ಯರಂತೆ ದೂರವಿಟ್ಟಿದೆ.
ಜನರ ಸಂಪರ್ಕದಿಂದ ದೂರವಿಟ್ಟಿರುವುದರ ಜತೆಗೆ ಅಧಿಕಾರಿಗಳೂ ಈ ಕಾಲನಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ದೂರವೇ ಉಳಿದಿದ್ದಾರೆ. ಈ ಕುರಿತು ನಗರಸಭೆ ಆಯುಕ್ತ ಮುನೀರ್ ಅಹ್ಮದ್ ಅವರನ್ನು ಕೇಳಿದಾಗ, ಕಾಲನಿಗೆ ರಸ್ತೆ ನಿರ್ಮಿಸುವ ಸಂಬಂಧವಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕುಷ್ಠ ರೋಗದಿಂದ ಸರಿಯಾಗಿ ನಡೆದಾಡಲು ಆಗದ ಈ ಜನರು ವಾಸಿಸುವ ಕಾಲನಿವರೆಗೆ ರಸ್ತೆ ನಿರ್ಮಿಸಬೇಕಿದೆ. ಸುತ್ತ ಬೆಳೆದು ನಿಂತಿರುವ ಮುಳ್ಳಿನ ಗಂಟಿಗಳನ್ನು ಕಟಾವು ಮಾಡಿ, ಆಗುತ್ತಿರುವ ಅತಿಕ್ರಮಣ ತಡೆಯಬೇಕಿದೆ. ಕುಷ್ಠ ರೋಗಿಗಳ ಮಕ್ಕಳ ಶಿಕ್ಷಣಕ್ಕೆ, ಕಾಲನಿಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಆಸಕ್ತಿ ವಹಿಸಬೇಕಿದೆ.
ಅತಿಕ್ರಮಣ...
1993ರಲ್ಲಿ ಅಂದಿನ ರಾಜ್ಯಸಭಾ ಸದಸ್ಯ ಕೋಲೂರು ಮಲ್ಲಪ್ಪ ಅವರ ಪ್ರಯತ್ನದಿಂದ 3 ಎಕರೆ ಪ್ರದೇಶದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಈ ಕಾಲನಿ ನಿರ್ಮಾಣ ಮಾಡಲಾಗಿತ್ತು. ಆದರೀಗ ಆ ವಿಶಾಲ ಪ್ರದೇಶ ಕಿರಿದಾಗುತ್ತ ಬಂದಿದೆ.
ಇದೇ ಪ್ರದೇಶದ ಸುತ್ತ ಈಗ ರಿಯಲ್ ಎಸ್ಟೇಟ್ ಅದ್ಯಮಿಗಳ ಕಣ್ಣೂ ಬಿದ್ದಿದೆ. ಆದ್ದರಿಂದ ತಮ್ಮನ್ನು ಹಾಗೂ ಕಾಲನಿಯನ್ನು ರಕ್ಷಿಸಿ ಎಂದು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಕನಿಷ್ಠ ಸೌಕರ್ಯವನ್ನಾದರೂ ಕಲ್ಪಿಸಿಕೊಡುವಂತೆ ಅಂಗಲಾಚಿದ್ದಾರೆ. ಆದರೆ ಇದುವರೆಗೆ ಸ್ಪಂದನೆ ಮಾತ್ರ ಸಿಕ್ಕಿಲ್ಲ.
ನಾರಾಯಣ ಹೆಗಡೆ