ಸೈದಾಪುರ ಹೆಸರಿಡಲು ಆಕ್ಷೇಪ
ಕನ್ನಡಪ್ರಭ ವಾರ್ತೆ ಯಾದಗಿರಿ ಆ.17
ಜಿಲ್ಲೆಯ ನಾರಾಯಣಪೇಟ ರೋಡ್ ರೇಲ್ವೆ ನಿಲ್ದಾಣದ ಹೆಸರು ಬದಲಿಸಿ ಸೈದಾಪುರ ಎಂದು ಮರು ನಾಮಕರಣ ಮಾಡುವುದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ತರುಣ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ಯಾತನಾಳ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದೆ.
ಈ ಕುರಿತು ರೇಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಘ ಪತ್ರ ಬರೆದು ಒತ್ತಾಯಿಸಿದೆ. ಇತ್ತೀಚೆಗೆ ಸಚಿವ ಸಂಪುಟದಲ್ಲಿ ನಾರಾಯಣಪೇಟ ರೇಲ್ವೆ ನಿಲ್ದಾಣಕ್ಕೆ ಸೈದಾಪುರ ಎಂದು ಮರು ನಾಮಕರಣ ಮಾಡುವ ನಿರ್ಧಾರ ಅಂಗೀಕರಿಸಿ, ರೇಲ್ವೆ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈ ನಿಲ್ದಾಣ ಕ್ಯಾತನಾಳ ಗ್ರಾಮದ ಕಂದಾಯ ವ್ಯಾಪ್ತಿಯಲ್ಲಿ ಬರುತ್ತದೆ. ಸೈದಾಪುರ ಕಂದಾಯ ವ್ಯಾಪ್ತಿಯಲ್ಲಿ ಬರುವುದೇ ಇಲ್ಲ.
ಕ್ಯಾತನಾಳ ನಾಮಕರಣಕ್ಕೆ ಒತ್ತಾಯ: ಅಲ್ಲದೇ ದೇಶದ ವಿವಿಧ ಕಡೆ ಸೈದಾಪುರ ರೇಲ್ವೆ ಸ್ಟೇಷನ್ ಎಂದು ಕರೆಯಲ್ಪಡುವ ಹೆಸರಿನ ಸ್ಟೇಷನ್‌ಗಳು ಬಹಳಷ್ಟಿವೆ. ಇದರಿಂದ ರೇಲ್ವೆ ಇಲಾಖೆಗೆ ತಾಂತ್ರಿಕ ತೊಂದರೆ ಜತೆಗೆ ಆಡಳಿತಾತ್ಮಕವಾಗಿ ಅನಾನುಕೂಲವಾಗಲಿದೆ. ಇದೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ, ಸೈದಾಪುರ ಬದಲಿಗೆ ಕ್ಯಾತನಾಳ ಎಂದು ನಾಮಕರಣ ಮಾಡಬೇಕು. ಈ ಹೆಸರಿನ ರೇಲ್ವೆ ಸ್ಟೇಷನ್ ದೇಶದ ಯಾವುದೇ ಭಾಗದಲ್ಲೂ ಇಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ತರುಣ ಸಂಘ ರೇಲ್ವೆ ಸಚಿವರಿಗೆ ಬರೆದ ಮನವಿಯಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರದ ಶಿಫಾರಸು ಪರಿಗಣಿಸಬೇಡಿ: ರಾಜ್ಯ ಸರ್ಕಾರ ಇದ್ಯಾವುದನ್ನೂ ಪರಿಶೀಲಿಸದೇ ತರಾತುರಿಯಲ್ಲಿ ಸೈದಾಪುರ ಎಂದು ಹೆಸರು ಬದಲಿಸುವುದಕ್ಕೆ ಶಿಫಾರಸು ಮಾಡಿದೆ.
ಇದು ತುಂಬಾ ಅನ್ಯಾಯ ಮತ್ತು ಕಾನೂನು ಬಾಹಿರ. ರಾಜ್ಯ ಸರ್ಕಾರದ ಶಿಫಾರಸ್ಸನ್ನು ಪರಿಗಣಿಸಬಾರದು. ತರಾತುರಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಬಾರದು ಎಂದು ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಒಮ್ಮತದ ನಿರ್ಣಯ ಪಡೆಯಿರಿ: ಎರಡೂ ಗ್ರಾಮಸ್ಥರ ಅಭಿಪ್ರಾಯ ಪಡೆದು ಒಮ್ಮತದ ನಿರ್ಣಯ ಪಡೆದುಕೊಳ್ಳಬೇಕು. ಕ್ಯಾತನಾಳ- ಸೈದಾಪುರ ಅಥವಾ ಸೈದಾಪುರ- ಕ್ಯಾತನಾಳ ಎಂದು ಮರು ನಾಮಕರಣ ಮಾಡುವುದಕ್ಕೆ ಯಾವುದೇ ತರಕಾರರು ಇಲ್ಲ. ಏಕಪಕ್ಷೀಯವಾಗಿ ಸೈದಾಪುರ ಎಂದು ನಾಮಕರಣ ಮಾಡಿದಲ್ಲಿ ಸಮಸ್ಯೆ ಆರಂಭವಾಗುತ್ತದೆ. ಧರಣಿ, ಸತ್ಯಾಗ್ರಹಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ತರುಣ ಸಂಘದ ಕಾರ್ಯದರ್ಶಿ ಭೀಮಣ್ಣ ಪುಜಾರಿ ಎಚ್ಚರಿಸಿದ್ದಾರೆ.