ಹಿಂ. ಪಟ್ಟಿಯಲ್ಲಿ ಕೆಲವು ಜಾತಿ ಸೇರ್ಪಡೆಗೆ ಶಿಫಾರಸು: ಶಂಕ್ರಪ್ಪ
ಗುಲ್ಬರ್ಗ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೆಲವು ಜಾತಿಗಳು ಕೈಬಿಟ್ಟು ಹೋಗಿದ್ದು, ಅವುಗಳ ಸೇರ್ಪಡೆಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕ್ರಪ್ಪ ಹೇಳಿದರು.
ನಗರದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅನೇಕ ಜಾತಿಗಳು ಇನ್ನೂ ಜಾತಿವಾರು ಪಟ್ಟಿಯಲ್ಲಿ ಸೇರಿಲ್ಲ. ಕೆಲವು ಜನಾಂಗದ ಮುಖಂಡರ ಮನವಿಯ ಮೇರೆಗೆ ಸಮೀಕ್ಷೆ ನಡೆಸಿ ಅತ್ಯಂತ ಹಿಂದುಳಿದ ಜನಾಂಗವನ್ನು ಗುರುತಿಸಿ ಅಂತಹ ಜಾತಿಗಳು ಸೇರ್ಪಡೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಕೆಲವು ಜಾತಿಗಳ ಆರ್ಥಿಕ ಪರಿಸ್ಥಿತಿ ಮತ್ತು ಶೈಕ್ಷಣಿಕ ಮಟ್ಟವನ್ನು ಅಧ್ಯಯನ ಮಾಡಿ ಪ್ರವರ್ಗಗಳಲ್ಲಿ ಬದಲಾವಣೆ ಮಾಡಲು ವರದಿಯನ್ನು ಸಿದ್ಧಪಡಿಸಲಾಗಿದೆ. ಸೆ.19 ಮತ್ತು 20ರಂದು ಬೆಂಗಳೂರಿನಲ್ಲಿ ಸಾರ್ವಜನಿಕ ಆಹವಾಲುಗಳನ್ನು ಸ್ವೀಕರಿಸಿದ ನಂತರ, ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.