'ಇನ್ನೊಬ್ಬರ ಹಕ್ಕು ಕಸಿದುಕೊಳ್ಳಬಾರದು'
ಹುಣಸಗಿ: ಕೃಷ್ಣಾ ಅಚ್ಚಕಟ್ಟು ಪ್ರದೇಶದ ಪ್ರತಿಯೊಬ್ಬ ರೈತ ತನ್ನ ಹಕ್ಕಿನ ನೀರು ಪಡೆಯಲು ಅರ್ಹನಿದ್ದಾನೆ. ಆದರೆ ಹೆಚ್ಚಿನ ನೀರು ಪಡೆದುಕೊಂಡಲ್ಲಿ ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡತ್ತಾಗುತ್ತದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಪಾಟೀಲ್ ರೈತರಿಗೆ ಕಿವಿಮಾತು ಹೇಳಿದರು.
ಮಿತವಾಗಿ ಬಳಸಿ: ಸಮೀಪದ ಕಾಮನಟಗಿ ಗ್ರಾಮದಲ್ಲಿ ವಿತರಣಾ ಕಾಲುವೆ ಹತ್ತಿರ ನಡೆದ ಕೃಷ್ಣೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಕೃಷ್ಣಾ ಅಚ್ಚಕಟ್ಟು ಪ್ರದೇಶದ ರೈತರು ಅಮೂಲ್ಯವಾದ ಜಲವನ್ನು ಪೋಲು ಮಾಡದೇ ಮಿತವಾಗಿ ಬಳಸಬೇಕು ಮತ್ತು ಕೆಳಭಾಗದ ರೈತರಿಗೂ ನೀರು ತಲುಪುವಂತಾಗಬೇಕು. ಈ ಭಾಗದ ಪ್ರತಿಯೊಬ್ಬ ರೈತ ನಮ್ಮ ಆಣೆಕಟ್ಟಿನ ನೀರಿನ ಸಂಗ್ರಹಣಾ ಸಾಮರ್ಥ್ಯ, ಒಟ್ಟು ನೀರಾವರಿ ಕ್ಷೇತ್ರ, ಜಲಾಶಯದಲ್ಲಿ ಎಷ್ಟು ನೀರಿದೆ, ಕಾಲುವೆಗೆ ಎಷ್ಟು ದಿನಗಳವರೆಗೆ ನೀರು ಬರಬಹುದು ಎಂಬಿತ್ಯಾದಿ ನೀರಾವರಿಯ ಸಮಗ್ರ ಮಾಹಿತಿಯನ್ನು ಪಡೆದಿರಬೇಕು. ರೈತರಾದ ನಾವು ನಮ್ಮ ಬದ್ಧತೆ ಹಾಗೂ ಹೊಣೆಗಾರಿಕೆ ಮರೆಯಬಾರದು ಎಂದು ಹೇಳಿದರು.
ರೈತರ ಕರ್ತವ್ಯ: ಮುಖಂಡ ಬಸವರಾಜ ಹವಾಲ್ದಾರ್ ಮಾತನಾಡಿ, ಕೃಷ್ಣೆ ಕೇವಲ ನಮ್ಮ ನದಿ ಮಾತ್ರವಲ್ಲ. ಈಕೆ ನಮ್ಮ ಜೀವನಾಡಿ. ನಮ್ಮ ಭಾಗದ ರೈತರನ್ನು ಸಲಹುತ್ತಿರುವ ತಾಯಿ. ಪ್ರತಿ ವರ್ಷ ನೀರನ್ನು ಬಳಸುವ ಮುನ್ನ ಶೃದ್ಧೆ ಭಕ್ತಿಯಿಂದ ಪೂಜಿಸಿ ಬಾಗಿನ ಅರ್ಪಿಸುವುದು ಪ್ರತಿಯೊಬ್ಬ ರೈತರ ಕರ್ತವ್ಯವಾಗಿದೆ. ಕೃಷ್ಣೆಯು ರಭಸದಲ್ಲಿ ಹರಿಯುವುದನ್ನು ನೋಡಿ ಸಂತಸ ತಂದಿದೆ. ರೈತರು ಕಾಳಜಿ ಪೂರ್ವಕವಾಗಿ ನೀರನ್ನು ಉಪಯೋಗಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಕರ್ನಾಟಕ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ, ನಂದಪ್ಪ ಎಮ್ಮೆಟ್ಟಿ, ಪ್ರಾಣೇಶ ಕುಲಕರ್ಣಿ, ರಂಗಪ್ಪ ಡಂಗಿ, ಎಂ.ಆರ್. ಖಾಜಿ, ವಿಜಯಕುಮಾರ ದೇಸಾಯಿ, ಶೇಖರಗೌಡ ಹುಣಸಗಿ, ನಿಂಗನಗೌಡ ಗುಳಬಾಳ, ಅಣ್ಣಾಜಿಗೌಡ ಮುದನೂರ, ನರಸಿಂಹರಾವ್ ಜಹಾಗೀರದಾರ ಸೇರಿದಂತೆ ರೈತ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಬಸವರಾಜ ಹವಾಲ್ದಾರ ಸ್ವಾಗತಿಸಿದರು.
ಗೊಲ್ಲಾಳಭಟ್ ಜೋಷಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲಪ್ಪ ದೇಸಾಯಿ ವಂದಿಸಿದರು.