ಒಳಚರಂಡಿ ಜೋಡಣೆಯ ಸಕ್ರಮಕ್ಕೆ ಮಂಡಳಿ ಸೂಚನೆ
ಗುಲ್ಬರ್ಗ: ಗೃಹ, ಗೃಹೇತರ, ವಾಣಿಜ್ಯ ಮಳಿಗೆಗಳಿಗೆ ಪಡೆದುಕೊಂಡಿರುವ ಒಳಚರಂಡಿ ಜೋಡಣೆಯನ್ನು ಸಕ್ರಮಗೊಳಿಸಿಕೊಳ್ಳಲು ನಿಗದಿಪಡಿಸಿರುವ ಶುಲ್ಕವನ್ನು ಭರಿಸಲು ತಮ್ಮ ಆಸ್ತಿಯ ದಾಖಲೆಯೊಂದಿಗೆ ಮಂಡಳಿ ಅಧಿಕಾರಿಗಳನ್ನು ಆ.31ರೊಳಗೆ ಸಂಪರ್ಕಿಸಿ ತಮ್ಮ ಜೋಡಣೆಯನ್ನು ಸಕ್ರಮಗೊಳಿಸಿಕೊಳ್ಳಲು ಸೂಚಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಗುಲ್ಬರ್ಗ ನಗರದ ನೀರು ಸರಬರಾಜು ಯೋಜನೆಯ ಹಾಗೂ ಒಳಚರಂಡಿ ಯೋಜನೆಯ ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ಗುಲ್ಬರ್ಗ ಮಹಾನಗರ ಪಾಲಿಕೆಯಿಂದ ಜಲ ಮಂಡಳಿಗೆ 2011ರ ಡಿಸೆಂಬರ್ 1ರಂದು ಹಸ್ತಾಂತರಿಸಿಕೊಳ್ಳಲಾಗಿದೆ.
ಹಸ್ತಾಂತರಿಸಿಕೊಳ್ಳುವಾಗ ಗೃಹಗಳಿಗೆ, ಗೃಹೇತರ ಬಳಕೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ಒಳಚರಂಡಿ ಜೋಡಣೆಗಳು ಅಧಿಕೃತವಾಗಿ 1900 ಇರುತ್ತವೆ. ಆದರೆ ಮಹಾನಗರದಲ್ಲಿ ಪ್ರತಿಯೊಂದು ಗೃಹಗಳಿಗೆ, ಗೃಹೇತರ ಬಳಕೆಗೆ ಮತ್ತು ವಾಣಿಜ್ಯ ಮಳಿಗೆಗಳು ಅಕ್ರಮವಾಗಿ ಸಾರ್ವಜನಿಕರು ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆಯದೇ ಒಳಚರಂಡಿಯ ಜೋಡಣೆ ತೆಗೆದುಕೊಂಡಿರುವುದನ್ನು ಸರ್ವೆ ಮೂಲಕ ಕಂಡು ಬಂದಿದೆ. ಕಾಲಾವಧಿ ನಂತರ ಅಕ್ರಮವಾಗಿ ಕಂಡುಬಂದ ಒಳಚರಂಡಿ ಜೋಡಣೆಯನ್ನು ತಕ್ಷಣವಾಗಿ ಕಡಿತಗೊಳಿಸಿ, ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದೆಂದು ಎಂದು ಗುಲ್ಬರ್ಗ ವಿಭಾಗದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.