ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದನದ ಕೊಟ್ಟಿಗೆಯಲ್ಲಿ ಮೊರಾರ್ಜಿ ಶಾಲೆ!

Rashmi Kasaragodu
Updated On : 19 Aug 2013, 11:43 am

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಆ.18
ಶಾಲೆನಾ ಇದು.. ದನದ ಕೊಟ್ಟಿಗೆಯಾಗಿದೆಯಲ್ರಿ... ಎಂದು ಶಾಲೆಗೆ ಭೇಟಿ ನೀಡುವ ಸಾಹೇಬರು, ಗಣ್ಯರು ತಾವು ಶಾಲೆಯಲ್ಲಿನ ಅವ್ಯವಸ್ಥೆ ಕಂಡು ಹೇಳುವ ಮಾತಿದು. ಆದ್ರೆ ಶಾಲೆಯನ್ನೇ ದನದ ಕೊಟ್ಟಿಗೆಯಲ್ಲಿ ಆರಂಭಿಸಿದರೆ...!?
ದನ ಕಟ್ಟುವ ಕೊಟ್ಟಿಗೆಯಲ್ಲೇ ಶಾಲೆ ನಡೆದಿರುವ ಅಪರೂಪದ ಪ್ರಸಂಗ ಜಿಲ್ಲೆಯ ಅಫಜಲ್ಪುರ ತಾಲೂಕಿನ ಗಡಿಭಾಗ ಕರ್ಜಗಿಗೆ ಭೇಟಿ ನೀಡಿದವರು ಯಾರಾದರೂ ನೋಡಬಹುದು. ಇಲ್ಲಿ ಸರ್ಕಾರದ ಮೊರಾರ್ಜಿ ವಸತಿ ಶಾಲೆಯನ್ನೇ ದನದ ಕೊಟ್ಟಿಗೆಯಲ್ಲಿ ಆರಂಭಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿರುವ ಈ ದನದ ಕೊಟ್ಟಿಗೆಗೇ ಮಾಸಿಕ ಸಾವಿರಾರು ರುಪಾಯಿ ಬಾಡಿಗೆ ತೆತ್ತು ಶಾಲೆ ನಡೆಸಲಾಗುತ್ತಿದೆ!.
ಬಯಲಲ್ಲೇ ಎಲ್ಲಾ...!: ಇದು ವಸತಿ ಶಾಲೆಯಾದರೂ ವಾಸಯೋಗ್ಯ ಪರಿಸರ ಇಲ್ಲಿಲ್ಲ. ಮಕ್ಕಳ ವಸತಿಗೆ ಸೌಕರ್ಯಗಳ ಬರ, ಪಾಠ ನಡೆಯುವ ತರಗತಿ ಕೋಣೆಗಳಲ್ಲೇ ಬಾಲಕಿಯರು ಬಟ್ಟೆ ಬದ್ಲಿಸ್ಬೇಬೇಕು. ಬಾಲಕರು ಹುಣಸೆ, ಬೇವಿನ ಮರಗಳ ಕೆಳಗೋ, ತೋಟದ ಬಾವಿಯ ಅಕ್ಕಪಕ್ಕ ನಿಂತೋ ಬಟ್ಟೆ ತೊಡ್ಬೇಕು. ಜೋರಾಗಿ ಗಾಳಿ ಬೀಸಿದರೆ ಹಾರಿ ಹೋಗುವ, ಮೈ ಮೇಲೆಯೇ ಬೀಳುವ, ಸದಾ ಸದ್ದು ಮಾಡುವ ದನ ಕಟ್ಟುವ ಕೊಟ್ಟಿಗೆಯ ಶೆಡ್ಗಳೇ ಬೆಡ್ ರೂಂ. ಪ್ರೌಢಶಾಲಾ ಹೆಣ್ಮಕ್ಕಳು ಸ್ನಾನಾದಿ ಬೆಳಗಿನ ಕ್ರಿಯೆಗೆ ಬಯಲನ್ನೇ ಅವಲಂಬಿಸಬೇಕು.
ಹಳ್ಳಿಗಾಡಿನ ಜಾಣ-ಜಾಣೆಯರಿಗೆ ಉತ್ತಮ ಶಿಕ್ಷಣ ಕೊಡುವ ಉದಾತ್ತ ಪರಿಕಲ್ಪನೆಯಿಂದ ಆರಂಭವಾಗಿರುವ ಮೊರಾರ್ಜಿ ವಸತಿ ಶಾಲೆ ಯೋಜನೆ ಕರ್ಜಗಿಯಲ್ಲಿ ಸಂಪೂರ್ಣ ಗೋತಾ ಹೊಡೆದಿದೆ.
ಶಾಲೆಯ ಕಟ್ಟಡ ಸೌಲಭ್ಯಪೂರ್ಣವಾಗಿದ್ದರೆಷ್ಟು ಬಿಟ್ಟರೆಷ್ಟು. ಇಲ್ಲಿ ಕಲಿಕೆಗೆ ಬರುವ ಮಕ್ಕಳಿಗೆ ಮೂಲ ಸೌಕರ್ಯಗಳು ಸಿಕ್ಕರೆಷ್ಟು, ಬಿಟ್ಟರೆಷ್ಟು ಎಂದು ಕಳೆದ 6 ವರ್ಷಗಳಿಂದ ಈ ಶಾಲೆ ತೋಟದಲ್ಲಿನ ದನ ಕಟ್ಟುವುದಕ್ಕೆ ನಿರ್ಮಿಸಿರುವ ಟಿನ್ ಶೆಡ್ನಲ್ಲೇ ನಡೆಯುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿರುವ ಈ ಶಾಲೆ ತೋಟದ ದನದ ಕೊಟ್ಟಿಗೆಯಲ್ಲಿ ನಡೆಸಲು ಮಾಸಿಕ ಸಾವಿರಾರು ರುಪಾಯಿ ಬಾಡಿಗೆ ಸರ್ಕಾರವೇ ಕೊಡುತ್ತಿದೆ.
180 ಮಕ್ಕಳ ವಾಸ: 'ಕನ್ನಡಪ್ರಭ' ಈ ಶಾಲೆಗೆ ಭೇಟಿ ಕೊಟ್ಟಾಗ ತರಗತಿ ಕೋಣೆಗಳಲ್ಲೇ ಮಕ್ಕಳು ಹಾಸಿಗೆ- ಹೊದಿಕೆ, ತಮ್ಮ ದಿರಿಸುಗಳೊಂದಿಗೆ ವಾಸವಾಗಿದ್ದರು. 'ತರಗತಿನೂ ಇಲ್ಲೇ ನಡಿತಾವ್ರಿ, ನಾವು ಮಲಗಿಕೊಳ್ಳೋದು ಇಲ್ಲೇರಿ' ಎಂದು ಬಾಲಕಿಯರು ಹೇಳಿದರು.
'ನಮಗ ಪ್ರತ್ಯೇಕ ವಾಸದ ಕೋಣೆಗಳೇನು ಇಲ್ರಿ, ಮರದ ಕೆಳಗೇ ಜಳಕ(ಸ್ನಾನ) ಮಾಡೋದ್ರಿ, ಬೈಲಕಡಿಗೆ ಹೋಗಿ ಬರೋದ್ರಿ, ಈ ಪತ್ರಾ(ಟಿನ್) ಶೆಡ್ನಾಗೇ ಪೆಟ್ಟಿಗೆ ಇಟ್ಕೊಂಡು ಮಲಗೋದ್ರಿ' ಬಾಲಕರು ಹೇಳಿದರು.
6ರಿಂದ 10ನೇ ತರಗತಿಯವರೆಗೂ ಇಲ್ಲಿ ಕಲಿಯಲು ದೂರದೂರುಗಳಿಂದ ಬಂದಿರುವ 180 ಮಕ್ಕಳಿದ್ದಾರೆ. ಇದರಲ್ಲಿ ಪ್ರತಿಶತ 60ರಷ್ಟು ಹೆಣ್ಮಕ್ಕಳಿದ್ದಾರೆ. ಇವರ್ಯಾರಿಗೂ ಸುರಕ್ಷಿತ ವಾಸಯೋಗ್ಯ ಪರಿಸರ ಇಲ್ಲಿಲ್ಲ. ಇಂತಹ ದೊಡ್ಡಿಯಲ್ಲೇ 6 ವರ್ಷಗಳಿಂದ ಶಾಲೆ ಸಾಗಿದೆ.
ದಡಬಡ ಸದ್ದಿನ ಟಿನ್ ಶೆಡ್: ಬಾಲಕರು ಮಲಗುವ ತಗಡಿನ ಶೆಡ್ ಕೋಣೆ(ದನದ ಕೊಟ್ಟಿಗೆ) ಮಳೆಗಾಲದಲ್ಲಿ ಸೋರುತ್ತದೆ, ಬೇಸಿಗೆಯಲ್ಲಿ ಕಾದು ಕೆಂಡವಾಗುತ್ತದೆ, ಚಳಿಗಾಲದಲ್ಲಿ ತಂಪಾಗುತ್ತದೆ. ಫ್ಯಾನ್, ಪ್ರಖರ ಬೆಳಕಿನ ಸೌಕರ್ಯವೂ ಇಲ್ಲಿಲ್ಲ. ಓದುವ ಮಕ್ಕಳು ಇಲ್ಲಿರುತ್ತಾರೆ ಎಂಬುದೇ ದುರಂತ.
ಇಲ್ಲಿ ಮಕ್ಕಳಿಗಾಗಿಯೇ ಕಬ್ಬಿಣದ ಮಂಚಗಳು ಪೂರೈಕೆಯಾಗಿವೆ. ತರಗತಿ ಕೋಣೆಗಾಗಿ ಡೆಸ್ಕ್ಗಳೂ ಸರಬರಾಜಾಗಿವೆ. ಆದರೆ ಕೊಟ್ಟಿಗೆ ಶಾಲೆಯಲ್ಲಿ ಇವುಗಳನ್ನೆಲ್ಲ ಒಪ್ಪ ಓರಣವಾಗಿ ಇಡಲು ಸ್ಥಳಾವಕಾಶವೇ ಇಲ್ಲ. ಹೀಗಾಗಿ ಮಂಚ, ಡೆಸ್ಕ್ಗಳನ್ನೆಲ್ಲ ತೋಟದ ಬಯಲಲ್ಲಿ ಎಸೆಯಲಾಗಿದ್ದು ಅವೆಲ್ಲ ಮಳೆಗೆ ತುಕ್ಕು ಹಿಡಿದಿವೆ.
ಬಾಲಕಿಯರ ಪರದಾಟ ದೇವರೇ ಬಲ್ಲ: ಬೆಳಗಿನ ಕರ್ಮಗಳನ್ನು ಪೂರೈಸುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಬಾಲಕಿಯರ ಸುತ್ತ ಆವರಿಸುವ ಗೋಳು ದೂರವಾಗೋದೇ ಇಲ್ಲ. ಸ್ನಾನ ಮಾಡಲು ಇವರಿಗೆ ಮರೆಯಾಗಲಿ, ಪ್ರತ್ಯೇಕ ಕೋಣೆಯಾಗಲಿ ಇಲ್ಲ, ಬಟ್ಟೆ ಬದಲಿಸಲೂ ಪರದಾಡಬೇಕು, ಶೌಚಕ್ಕೆ ಹೋಗಲೂ ಇವರು ಅನುಭವಿಸುವ ತೊಂದರೆ ದೇವರೇ ಬಲ್ಲ. ಮಳೆಗಾಲದಲ್ಲಂತೂ ಇವರ ಕಷ್ಟಗಳು ದ್ವಿಗುಣಗೊಳ್ಳುತ್ತವೆ.
ಸಮಾಜ ವಿಜ್ಞಾನ ಶಿಕ್ಷಕರಿಲ್ಲ: 6ರಿಂದ 10ನೇ ತರಗತಿಯ ಈ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಿಲ್ಲ. 6ನೇ ಮತ್ತು 7ನೇ ತರಗತಿಗಳಿಗೆ ಮರವೇ ಆಸರೆ. ತರಗತಿ ಕೋಣೆಗಳಿಗೂ ಬರ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತೋಟದ ಮುಂಭಾಗದಲ್ಲಿರುವ ಮತ್ತೊಂದು ಶೆಡ್ನಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೂ ತೊಂದರೆಗಳೇ ಅಧಿಕ. ಆದಾಗ್ಯೂ ಇದ್ಯಾವುದನ್ನು ಬಾಯಿ ಬಿಡದೆ ಮಕ್ಕಳು ಇಲ್ಲಿ ಓದುತ್ತ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ.
ಯಾಕೆ ಹೀಗೆ...?: ಪಾಲಕರಿಂದ ದೂರವಾಗಿ 6ನೇ ತರಗತಿಯಿಂದಲೇ ಇಲ್ಲಿಗೆ ಕಲಿಯಲು ಬರುವ ಮಕ್ಕಳಿಗೆ ವಾಸಯೋಗ್ಯ ಪರಿಸರ ಇಲ್ಲಿ ಇಲ್ಲ. ಸರ್ಕಾರ ಪ್ರತಿ ತಿಂಗಳು ಪ್ರತಿ ಮಗುವಿಗೆ ಏನಿಲ್ಲವೆಂದರೂ ಹೆಚ್ಚುಕಮ್ಮಿ 1,300ರಿಂದ 1,500 ರುಪಾಯಿ ವೆಚ್ಚ ಮಾಡುತ್ತದೆ.
ವಸತಿ ಶಿಕ್ಷಣ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ಈ ಶಾಲೆಯ ಮೇಲೆ ತುಂಬ ನಿಗಾ ಇಡಬೇಕು. ಆದರೆ ಪ್ರತಿ ಮಗುವಿನ ಮೇಲೆ ಸಾವಿರಾರು ರುಪಾಯಿ ಮಾಸಿಕ ವೆಚ್ಚವಾಗುತ್ತಿದ್ದರೂ ಅವರನ್ನೆಲ್ಲ ಇಂತಹ ದನದ ದೊಡ್ಡಿಯಲ್ಲಿ ಕೂಡಿ ಹಾಕಿ ಓದು ಎಂದು ಹೇಳುವುದು ಅದೆಷ್ಟು ಸರಿ...? ಈ ಶಾಲೆ ಆರಂಭವಾಗಿ ವರ್ಷ 6 ಕಳೆದರೂ ಇಂದಿಗೂ ಸುಸಜ್ಜಿತ ಕಟ್ಟಡ ಯಾಕೆ ಇಲ್ಲಿ ಸಿದ್ಧಗೊಳ್ಳಲಿಲ್ಲ...? ಗಡಿಭಾಗದ ಕರ್ಜಗಿ ಮೊರಾರ್ಜಿ ಶಾಲೆ ಬಗ್ಗೆ ಸರ್ಕಾರಕ್ಕೆ ಅದ್ಯಾಕೆ ತಾತ್ಸಾರ ಭಾವನೆ ತಾಳಿದೆಯೋ...?


ಅಪಾಯಗಳ ತೂಗುಗತ್ತಿ


1) ಬಾಲಕ- ಬಾಲಕಿಯರು ಮಲಗುವ ಶೆಡ್ಗಳ ಗೋಡೆಗಳು ಬಿರುಕು ಬಿಟ್ಟಿದ್ದು ಈಗಲೋ ಆಗಲೋ ಬೀಳುವ ಹಂತದಲ್ಲಿವೆ. ಟಿನ್ ಶೆಡ್ಗಳು ಸದ್ದು ಮಾಡುತ್ತಿವೆ. ಗೋಡೆ ಬೀಳೋದಾಗಲಿ, ಪತ್ರಾ ಹಾರಿ ಹೋದರೂ ಸರಿ, ಇಲ್ಲಿ ಮಕ್ಕಳ ಜೀವಕ್ಕೇ ಅಪಾಯ ನಿಶ್ಚಿತ.

2) ತೋಟದ ತೆರೆದ ಬಾವಿ ಇಲ್ಲಿದೆ. ಇದಕ್ಕೆ ಸುರಕ್ಷಿತ ಬೇಲಿಯೂ ಹಾಕಿಲ್ಲ. ಸದಾಕಾಲ ನೂರಾರು ಮಕ್ಕಳು ಓಡಾಡುವ ಈ ಪರಿಸರದಲ್ಲಿ ತೆರೆದ ಬಾವಿಯನ್ನು ಹೀಗೆ ಬಿಟ್ಟಿದ್ದು ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಬಾವಿಗೆ ಬೇಲಿ ಹಾಕಲೇಬೇಕು.

3) ತರಗತಿ ನಡೆಸಲು ಇನ್ನೂ ಹೆಚ್ಚಿನ ಹಾಗೂ ಸಸಜ್ಜಿತ ಕೋಣೆಗಳು ಇಲ್ಲಿ ಬೇಕು, ಮಕ್ಕಳು ಓದಿ ಮಲಗಲು ಪ್ರತ್ಯೇಕ ಕೋಣೆಗಳು ಬೇಕು. ಇಲ್ಲದೆ ಹೋದಲ್ಲಿ ಮಕ್ಕಳ ಶೈಕ್ಷಣಿಕ ಮಟ್ಟದ ಮೇಲೆ ಮಾರಕ ಪರಿಣಾಮ ಉಂಟಾಗುವ ಆತಂಕ.
ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement