ಹೆಚ್ಚುವರಿ ಶಿಕ್ಷಕರ ಸ್ಥಾನ ಹೊಂದಾಣಿಕೆ ಕೈಬಿಡಲು ಮನವಿ
ಯಾದಗಿರಿ: ಸರ್ಕಾರಿ ಪ್ರೌಢಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರ ಸ್ಥಾನ ಹೊಂದಾಣಿಕೆ ಪ್ರಕ್ರಿಯೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಜವಳಿ, ಬಂದರು ಮತ್ತು ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ ಅವರಿಗೆ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಕೆಂಭಾವಿ ಮನವಿ ಸಲ್ಲಿಸಿದರು.
ತೊಂದರೆ: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆದಿವೆ. ಆದರೆ ಪ್ರೌಢಶಾಲಾ ಸಹ ಶಿಕ್ಷಕರ ಹೆಚ್ಚುವರಿ ಶಿಕ್ಷಕರ ಸ್ಥಾನ ಹೊಂದಾಣಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪ್ರಕ್ರಿಯೆಯಿಂದ ಶಿಕ್ಷಕರಿಗೆ ಯಾವುದೇ ಲಾಭವಿಲ್ಲದೆ ತೊಂದರೆಯೇ ಹೆಚ್ಚಾಗುತ್ತಿದೆ ಎಂದು ವಿವರಿಸಿದರು. ನಿಯಮದ ಪ್ರಕಾರ ಶಿಕ್ಷಕ ಹಾಗೂ ಮಕ್ಕಳ ಅನುಪಾತ 1: 30 ಇರಬೇಕಾಗಿದ್ದು, ಮಕ್ಕಳ ವಿದ್ಯಾಬ್ಯಾಸಕ್ಕೂ ತೊಂದರೆಯಾಗಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಮಾರಕವಾಗುತ್ತದೆ. ಕಾರಣ ಈ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಬಿ.ರಾಜಶೇಖರಗೌಡ, ಖಜಾಂಚಿ ಸಿದ್ದಪ್ಪ ಆವಂಟಿ, ಶಂಕರಲಿಂಗಪ್ಪ, ಆದ್ಯಪ್ಪ ಬಾಗ್ಲಿ ಇದ್ದರು.