31ರಂದು 'ಹೈ' ಕಾಯಂ ಪೀಠ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ. 19
ಆ. 31ರಂದು ಗುಲ್ಬರ್ಗದ ಸಂಚಾರಿ ಹೈಕೋರ್ಟ್ ಪೀಠ ಕಾಯಂಗೊಳ್ಳುತ್ತಿದ್ದು, ಅದರ ಉದ್ಘಾಟನೆಗೆ ಆಯೋಜಿಲಾಗಿರುವ ಕಾರ್ಯಕ್ರಮವು ಜಿಲ್ಲೆಯ ಜನರಲ್ಲಿ ಸದಾ ಸ್ಮರಣೀಯವಾಗಿರಬೇಕು. ಈ ನಿಟ್ಟಿನಲ್ಲಿ ಎಲ್ಲೂ ಲೋಪವಾಗದಂತೆ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಸಮಿತಿಗಳ ಸದಸ್ಯರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಜವಾಬ್ದಾರಿ: ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹೈಕೋರ್ಟ್ ಕಾಯಂ ಪೀಠದ ಸಮಾರಂಭ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭಕ್ಕೆ ಏಳು ಸಮಿತಿಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಪ್ರಮುಖ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಯುತ ಕಾರ್ಯ ನೀಡಲಾಗಿದೆ. ನಿರ್ವಹಣಾ ಸಮಿತಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿದ್ದು, ಇವರು ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಉಸ್ತುವಾರಿ: ವಸತಿ ಸಮಿತಿಯಲ್ಲಿ ಸಹಾಯಕ ಆಯುಕ್ತ ಹರ್ಷಾ ಶೆಟ್ಟಿ, ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರವಿ ಕಿರಣ ಒಂಟಿ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಪದ್ಮಕುಮಾರ್ ಕುಲಕರ್ಣಿ ಹಾಗೂ ಗುಲ್ಬರ್ಗ ತಹಶೀಲ್ದಾರ್ ವಿನೋದ ರೆಡ್ಡಿ ಅವರಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುವ ಗಣ್ಯರ ವಾಸ್ತವ್ಯದ ಉಸ್ತುವಾರಿ ವಹಿಸಲು ಜಿಲ್ಲಾಧಿಕಾರಿ ತಿಳಿಸಿದರು.
ಸಾರಿಗೆ ಸಮಿತಿಯಲ್ಲಿ ಎನ್ಇಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಮೂರ್ತಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ ತಳಕೇರಿ ಹಾಗೂ ಗುಲ್ಬರ್ಗ ಸಾರಿಗೆ ಅಧಿಕಾರಿ ಈಶ್ವರ ಬಸಪ್ಪ ಅವಂಟಿ ಅವರನ್ನು ನಿಯೋಜಿಸಲಾಗಿದೆ.