ಎಸ್ಸಿ, ಎಸ್ಟಿ ಎಂಜಿನಿಯರ್ಗಳಿಗೆ ಸೇವಾ ಭದ್ರತೆಗೆ ಆಗ್ರಹ
ಗುಲ್ಬರ್ಗ: ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಬ್ಯಾಕ್ಲಾಗ್ ಅಡಿಯಲ್ಲಿ ನೇಮಕಾತಿಯಾಗಿ ಕೆಲಸ ನಿರ್ವಹಿಸುತ್ತಿರುವ ಎಸ್ಸಿ, ಎಸ್ಟಿ ಎಂಜಿನಿಯರ್ಗಳಿಗೆ ಸೇವಾ ಭದ್ರತೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಎಂಜಿನಿಯರ್ಗಳ (ಬ್ಯಾಕ್ಲಾಗ್) ಸಂಘ ಒತ್ತಾಯಿಸಿದೆ.
10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಇದುವರೆಗೂ ಬಡ್ತಿ ಸೇರಿದಂತೆ ಯಾವುದೇ ಸೇವಾ ಭದ್ರತೆ ಕಲ್ಪಿಸಿಲ್ಲ. ಈ ಅನ್ಯಾಯ ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಶೀಘ್ರದಲ್ಲಿ ಬೆಂಗಳೂರಿಗೆ ನಿಯೋಗ ತೆರಳಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ ಅವರಿಗೆ ಭೇಟಿ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದಾನಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಇಲಾಖೆಯಲ್ಲಿ ಬಾಕಿ ಉಳಿದಿರುವ 22 ಜನ ಎಂಜಿನಿಯರುಗಳ ಪ್ರೊಬೇಷನರಿ ಡಿಕ್ಲರೇಷನ್ ಮಾಡಬೇಕು. ಆರ್ಟಿಕಲ್ 32 ಪ್ರಕಾರ ಜೇಷ್ಠತೆ ಪಟ್ಟಿ ತಯಾರಿಸಿ ಮುಂಬಡ್ತಿ ನೀಡಬೇಕು. ಸರ್ವೋಚ್ಛ ನ್ಯಾಯಾಲಯದಲ್ಲಿರುವ ಎಲ್ಲ ದಾವೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ರಾಜ್ಯದ ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಸಹಾಯಕ ಕಿರಿಯ 1347 ಎಂಜಿನಿಯರ್ಗಳು ಈಗಾಗಲೇ ವಿವಿಧ ಇಲಾಖೆಗಳಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಸೇವೆ ಸಲ್ಲಿಸುತ್ತಿರುವ ಸುಮಾರು 200 ಎಂಜಿನಿಯರಗಳು 5 ರಿಂದ 10 ವರ್ಷಗಳಲ್ಲಿ ನಿವೃತ್ತಿಗೊಳ್ಳಲಿದ್ದಾರೆ. ಆದರೆ, ಸರ್ಕಾರದಿಂದ ಈವರೆಗೆ ಯಾವುದೇ ಸೇವಾ ಸೌಲಭ್ಯ ದೊರೆತಿಲ್ಲ ಎಂದು ಅಸಮಾಧಾನಗೊಂಡರು.
ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ನಾಗಮೂರ್ತಿ ಶೀಲವಂತ, ಜಂಟಿ ಕಾರ್ಯದರ್ಶಿ ದೇವಣ್ಣ ಕಟ್ಟಿ, ಸದಸ್ಯ ನಾಗೇಂದ್ರಪ್ಪ ಇತರರು ಉಪಸ್ಥಿತರಿದ್ದರು.