'ಕ್ರೀಡೆಯಿಂದ ಉತ್ತಮ ಆರೋಗ್ಯ'
ಗುರುಮಠಕಲ್: ಮಕ್ಕಳು ಸದೃಢರಾಗಿ ಬೆಳೆದು ಉತ್ತಮ ಆರೋಗ್ಯ ಪಡೆಯಬೇಕಾದರೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಂಕರ ಸೋನಾರ ಹೇಳಿದರು.
ಪಟ್ಟಣದ ಜವಾಹರಲಾಲ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ನಗರ ಪ್ರದೇಶದ ಪ್ರೌಢಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಭವಿಷ್ಯ ಇಂದಿನ ಯುವ ಪೀಳಿಗೆಯ ಮೇಲೆ ಅವಲಂಬಿಸಿದೆ. ಅಂತಹ ಮಕ್ಕಳು ಸದೃಢವಾಗಿರಲು ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯಂತ ಅವಶ್ಯಕ. ಒಲಿಂಪಿಕ್ನಂಥ ಕ್ರೀಡಾಕೂಟಗಳಲ್ಲಿ ದೇಶದ ಸಾಧನೆ ಸಾಲದು. ಆದ್ದರಿಂದ ಕ್ರೀಡಾಪಟುಗಳನ್ನು ಗುರುತಿಸಿ ಅಗತ್ಯ ತರಬೇತಿ ಹಾಗೂ ಸೌಲಭ್ಯ ನೀಡಿ ಪ್ರತಿಭೆಗಳನ್ನು ಬೆಳೆಸುವುದು ಅಗತ್ಯ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡರಕಿ ಧ್ಯಜಾರೋಹಣ ನೆರವೇರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ವಲಯ ಶಿಕ್ಷಣ ಸಂಯೋಜಕ ದೇವಿಂದ್ರಪ್ಪ, ಬುಡಪ್ಪ, ಆನಿಲಕುಮಾರ, ಶರಣಪ್ಪ ಇತರರು ಇದ್ದರು. ನಂತರ ಸ್ಪರ್ಧೆಗಳು ನಡೆದವು.