ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣವಾಗಲಿ
ಶಹಾಪುರ: ನಮಗೆ ಅರಿವಿಲ್ಲದಂತೆ ಕ್ಷುಲ್ಲಕ ವಿಷಯವಾಗಿ ಮನಸ್ತಾಪ ಮಾಡಿಕೊಂಡು ವೈರತ್ವ ಸಾಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಸ್ವಪ್ರತಿಷ್ಠೆ ಬದಿಗೊತ್ತಿ ಭಿನ್ನಾಭಿಪ್ರಾಯವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಂಡಲ್ಲಿ ವೈವಾಹಿಕ ಜೀವನ ನೆಮ್ಮದಿಯಿಂದ ಕಳೆಯಲು ಸಾಧ್ಯ. ವಾಜ್ಯಮುಕ್ತ ಸಮಾಜ ನಿರ್ಮಾಣಕ್ಕೆ ಮಧ್ಯಸ್ಥಿಕೆಯು ಉತ್ತಮ ಸೇತುವೆಯಾಗಬಲ್ಲದು ಎಂದು ನ್ಯಾಯಾಧೀಶ ವೈ.ಕೆ. ಬೇನಾಳ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ, ತಾಲೂಕು ಮಧ್ಯಸ್ಥಿಕೆ ಕೇಂದ್ರ, ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಧ್ಯಸ್ಥಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ನೆಮ್ಮದಿ: ಸಣ್ಣಪುಟ್ಟ ವಿಷಯವನ್ನು ದೊಡ್ಡದು ಮಾಡಿಕೊಂಡು ಅನಾವಶ್ಯಕವಾಗಿ ನ್ಯಾಯಾಲಯಕ್ಕೆ ಅಲೆಯುವುದಕ್ಕಿಂತ ನಮ್ಮಲ್ಲಿ ರಾಜಿ ಸಂಧಾನ ಮಾಡಿಕೊಂಡರೆ, ಸಮಯ ಹಾಗೂ ಮಾನಸಿಕ ನೆಮ್ಮದಿ ದೊರೆಯುತ್ತದೆ. ಜಿದ್ದು ಸಾಧಿಸುವುದರಿಂದ ಮನಸ್ತಾಪ ಹೆಚ್ಚಾಗುತ್ತದೆ. ದ್ವೇಷ ಹಾಗೂ ಹಗೆತನಕ್ಕೆ ಜೋತು ಬಿದ್ದು ಜೀವನದಲ್ಲಿ ನೆಮ್ಮದಿ ಮಾಯವಾಗುತ್ತದೆ. ಎಲ್ಲಾ ಸಮಸ್ಯೆಗೂ ಒಂದು ಪರಿಹಾರವಿರುತ್ತದೆ. ರಾಜಿ, ಸಂಧಾನ ಇಲ್ಲವೇ ಮಧ್ಯಸ್ಥಿಕೆ ಇದಕ್ಕೆ ಉತ್ತಮ ಮಾರ್ಗವಾಗಿದೆ ಎಂದು ನ್ಯಾಯಾಧೀಶರು ಕರೆ ನೀಡಿದರು.
ಸಿಪಿಐ ಜೆ.ಎಸ್. ನ್ಯಾಮಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕ್ಷುಲ್ಲಕ ವಿಷಯವನ್ನು ದೊಡ್ಡದು ಮತ್ತು ಪ್ರತಿಷ್ಠೆ ಮಾಡಿಕೊಂಡು ಬಡಿದಾಡುವುದು ಸಾಮಾನ್ಯ. ಉಭಯ ಪಕ್ಷದವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ರಾಜಿ, ಸಂಧಾನ ಮಾಡಿಕೊಂಡು ಮುನ್ನಡೆಯುವ ಬಗ್ಗೆ ಪೊಲೀಸರು, ವಕೀಲರು ನಿಸ್ವಾರ್ಥವಾಗಿ ತಿಳಿಸಿದರೆ, ಹೆಚ್ಚಿನ ವಾಜ್ಯವನ್ನು ಬೆಳೆಯುವ ಹಂತದಲ್ಲಿ ಚಿವುಟಿ ಹಾಕಲು ಸಾಧ್ಯ. ಇದಕ್ಕೆ ವಕೀಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ಹೊನ್ನಾರಡ್ಡಿ ವಹಿಸಿದ್ದರು. ಸರ್ಕಾರಿ ಅಭಿಯೋಜಕ ಎಚ್.ಎಸ್. ಹಕೀಮ್, ಹಿರಿಯ ವಕೀಲ ಭಾಸ್ಕರರಾವ ಮುಡಬೂಳ, ಶ್ರೀನಿವಾಸರಾವ ಕುಲಕರ್ಣಿ, ಸಾಲೋಮನ್ ಆಲ್ಫ್ರೇಡ್ ವಿಶೇಷ ಉಪನ್ಯಾಸ ನೀಡಿದರು. ಉಮೇಶ ಕುಲಕರ್ಣಿ ಸ್ವಾಗತಿಸಿದರು. ಶರಣಬಸವ ನಾಗನಟಗಿ ನಿರೂಪಿಸಿದರು.