ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ತಡೆಹಿಡಿದು ನ್ಯೂನತೆ ಸರಿಪಡಿಸಿ'

Rashmi Kasaragodu
Updated On : 20 Aug 2013, 11:36 am

ಕ.ಪ್ರ.ವಾರ್ತೆ, ಗುಲ್ಬರ್ಗ, ಆ.19
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಸ್ಥಳಾಂತರಿಸುವ ಪ್ರಕ್ರಿಯೆ ತಡೆಹಿಡಿದು ಕೂಡಲೇ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನ್ಯೂನತೆ ಸರಿಪಡಿಸಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಕಾರ್ಯದರ್ಶಿಗಳಿಗೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುವ ಅವರು, ಶಿಕ್ಷಕರ ನ್ಯೂನತೆ ಸರಿಪಡಿಸಿದ ನಂತರ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.
ಹೊಸ ಶಿಕ್ಷಣ ನೀತಿ ಜಾರಿಗೆ ಇರುವುದರಿಂದ (ಗೋವಿಂದ ವರದಿ) 6 ರಿಂದ 8ನೇ ತರಗತಿ ಹಾಗೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸಲು (ಸ್ಟಾಫ್ ಪ್ಯಾಟರ್ನ್) ಸಿಬ್ಬಂದಿಸ್ತರ ವಿನ್ಯಾಸವನ್ನು ತಿಳಿಸಿ ಹೆಚ್ಚುವರಿ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅನುಪಾತ ಪ್ರಾಥಮಿಕ ಶಾಲೆಯಲ್ಲಿ 30:1 ಇದ್ದು, ಅದೇ ಸರ್ಕಾರದಿಂದ ನಡೆಯುತ್ತಿರುವ ಪ್ರತಿಭಾವಂತ ಪ್ರೌಢ ಶಾಲೆಗಳಲ್ಲಿ 40:1 ಇರುವ ಶಾಲೆಗಳಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಸ್ತೂರಬಾ ಶಾಲೆ, ಆದರ್ಶ ಇಂಗ್ಲಿಷ್ ಮಾಧ್ಯಮ (ಆರ್ಎಂಎಸ್ಎ) ನವೋದಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಆಯ್ಕೆ ಮಾಡಿ ಬೋಧಿಸುತ್ತಾರೆ. ಆದರೆ, ಸಾಮಾನ್ಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 7:1 ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಸಾಮಾನ್ಯ ಶಾಲೆಗಳಲ್ಲಿಯೂ ಕೂಡ 40:1ನ್ನು ನಿಗದಿಗೊಳಿಸಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಬೇಕು ಎಂದು ಆಗ್ರಹಿಸಿದರು.
ಹೈದ್ರಾಬಾದ್- ಕರ್ನಾಟಕ ಹಿಂದುಳಿದ ಪ್ರದೇಶದಲ್ಲಿ ಈಗಾಗಲೇ ಕೇಂದ್ರ ಸರ್ಕಾರವು 371 (ಜೆ) ಕಲಂ ಜಾರಿಗೆ ಮಾಡಿ ವಿಶೇಷವಾದ ಸ್ಥಾನಮಾನ ಕಲ್ಪಿಸಿದೆ. ಈ ಭಾಗದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ತಡೆಹಿಡಿದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮತ್ತು ಶಿಕ್ಷಕರಿಗೆ ನೆಮ್ಮದಿಯಿಂದ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement