ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

30ರಂದು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 21 Aug 2013, 12:14 pm

ಯಾದಗಿರಿ: ಶಹಾಪುರ ತಾಲೂಕಿನ ವಡಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಅವುಗಳ ಅಭಿವೃದ್ಧಿ ಹಾಗೂ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಆಗ್ರಹಿಸಿ ಆ.30ರಂದು ಭೀಮಾ ಬ್ರಿಜ್ ಹತ್ತಿರವಿರುವ ಹಿರೇವಡಗೇರಾ ಕ್ರಾಸ್ನಲ್ಲಿ ಶಹಾಪುರ- ಯಾದಗಿರಿ ರಾಜ್ಯ ಹೆದ್ದಾರಿ ತಡೆದು ಗ್ರಾಮಸ್ಥರು ಹಾಗೂ ವಾಹನ ಮಾಲೀಕರ ಜೊತೆಗೂಡಿ ಪ್ರತಿಭಟಿಸಲಾಗುವುದು ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಯಾದಗಿರಿ ಹಿರೇವಡಗೇರಾ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿರುವುದರಿಂದ ವಾಹನ ಸಂಚಾರಕ್ಕೆ, ಪ್ರಯಾಣಿಕರಿಗೆ ತೊಂದರೆಯಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಕೈ ಕಾಲುಗಳನ್ನು ಮುರಿದುಕೊಂಡು ಆಸ್ಪತ್ರೆಗೆ ಸೇರಿದ ಉದಾಹರಣೆ ಸಾಕಷ್ಟಿವೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ ಎಂದ್ದಾರೆ.
'ಸರ್ಕಾರಿ ನೌಕರರ ಹಿತಾಸಕ್ತಿ ಮುಖ್ಯ'
ಯಾದಗಿರಿ: ಜಿಲ್ಲೆಯ ಅಹಿಂದ ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡುವುದು ನೂತನ ಅಧ್ಯಕ್ಷರ ಜವಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಮೂಲಕ ನೌಕರರ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಬೇಕೆಂದು ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ ಸಜ್ಜನ ಹೇಳಿದರು. ಮಂಗಳವಾರ ರಾಜ್ಯ ಅಹಿಂದ ನೌಕರರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ನೇಮಕರಾದ ಎಂ.ವೆಂಕಟೇಶ ಅವರನ್ನು ಜಿಲ್ಲಾ ಲೊಕೋಪಯೋಗಿ ಇಲಾಖೆ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ನೌಕರರಿಗೆ ಒತ್ತಡ ಸಹಜ. ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭ ಗುರುಮಠಕಲ್ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಪ್ಯಾಟಿ, ನಾಗರಾಜ ರಂಗಂಪೇಟ್, ರಾಘವೇಂದ್ರ, ರಾಚಣ್ಣ ಕಂಬಳಿ, ಶಿಕ್ಷಕ ನಾಗರಡ್ಡಿ ವೆಂಕಟೇಶ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಮಕ್ಕಳಿಗೆ ವಿದ್ಯುತ್ ತಂತಿಯ ಆತಂಕ
ಯಾದಗಿರಿ: ತಾಲೂಕಿನ ಅಬ್ಬೆತುಮಕೂರಿನ ಸರ್ಕಾರಿ ಶಾಲೆ ಪಕ್ಕದಲ್ಲಿ ವಿದ್ಯುತ್ ತಂತಿ ಕೆಳಮಟ್ಟದಲ್ಲಿ ಹಾಯ್ದು ಹೋಗಿದೆ. ಸೋಮವಾರ ರಾತ್ರಿ ತಂತಿ ಹರಿದು ಬಿದ್ದ ಪರಿಣಾಮ ಶಾಲೆಗೆ ವಿದ್ಯಾರ್ಥಿಗಳು ಮಂಗಳವಾರ ಆತಂಕದಲ್ಲಿ ಶಾಲೆಗೆ ಹೋಗಿದ್ದಾರೆ. ಸ್ಥಳಕ್ಕೆ ಜೆಸ್ಕಾಂ ಸಹಾಯಕ ಅಭಿಯಂತರ ರಾಘವೇಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರೀಶಿಲಿಸಿ ದುರಸ್ತಿ ಕಾರ್ಯ ಕೈಗೊಂಡರು. ಶಾಲೆ ಪಕ್ಕದ ಅಂಗನವಾಡಿ ಕಟ್ಟಡ ಮೇಲೆ ವಿದ್ಯುತ್ ತಂತಿ ಜೋತು ಬಿದ್ದಿದ್ದು, ಅನಾಹುತಕ್ಕೆ ಎಡೆ ಮಾಡಿಕೊಡುತ್ತಿದೆ. ಕೂಡಲೇ ಅಧಿಕಾರಿಗಳು ಶಾಶ್ವತವಾಗಿ ಸಮಸ್ಯೆ ಪರಿಹಾರ ಮಾಡಬೇಕೆಂದು ಜಿಪಂ ಸದಸ್ಯ ಬಸವರಾಜ ಖಂಡ್ರೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement