ಆಸ್ಪತ್ರೆ ಅವ್ಯವಸ್ಥೆಗೆ ಜಿಪಂ ಅಧ್ಯಕ್ಷರ ಕಿಡಿ
ಶಹಾಪುರ: ತಾಲೂಕಿನ ದೊಡ್ಡ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಪಂ ಹಂಗಾಮಿ ಅಧ್ಯಕ್ಷ ಶರಣಿಕಕುಮಾರ ದೋಖಾ ಮಂಗಳವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ದಂಗಾದ ಘಟನೆ ಜರುಗಿತು.
ಇಡೀ ಆಸ್ಪತ್ರೆಯ ಆವರಣ ಮಳೆ ನೀರಿನಿಂದ ತುಂಬಿ ದುರ್ವಾಸನೆ ಬೀರುತ್ತಿತ್ತು. ಇನ್ನೂ ಆಸ್ಪತ್ರೆಯಲ್ಲಿನ ಬೆರಳೆಣಿಕೆಯಷ್ಟು ಸಿಬ್ಬಂದಿ ಕಾಟಾಚಾರಕ್ಕೆಂಬಂತೆ ಕಾರ್ಯನಿರ್ವಹಿಸುತ್ತಿದ್ದರು. ಇದನ್ನು ಕಂಡು ಕೆಂಡಾಮಂಡಲರಾದ ಅಧ್ಯಕ್ಷರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಹಾಪುರ ಮತಕ್ಷೇತ್ರದಲ್ಲಿಯೇ ಅತ್ಯಂತ ದೊಡ್ಡ ಹೋಬಳಿ ಕೇಂದ್ರ ಎನಿಸಿಕೊಂಡಿರುವ ಈ ಗ್ರಾಮದಲ್ಲಿನ ಆರೋಗ್ಯ ಕೇಂದ್ರವೇ ಅನಾರೋಗ್ಯ ಪೀಡಿತವಾಗಿದೆಯಲ್ಲ. ನಿಮಗೆ ಹೇಳೋರು ಕೇಳೊರು ಯಾರೂ ಇಲ್ವಾ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನೀರಲ್ಲಿ ಎದ್ದುಬಿದ್ದು ಆಸ್ಪತ್ರೆಗೆ: ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಆಸ್ಪತ್ರೆಯ ಆವರಣದಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಪ್ರತಿನಿತ್ಯ ರೋಗಿಗಳು ನಿಂತ ನೀರಲ್ಲಿ ಎದ್ದುಬಿದ್ದು ಆಸ್ಪತ್ರೆಗೆ ಬರುವಂತಾಗಿದೆ. ಮಾತ್ರವಲ್ಲ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ 2 ತಿಂಗಳು ಕಳೆದಿವೆ. ಇದರಿಂದ ಶಹಾಪುರ ಇಲ್ಲವೇ ಯಾದಗಿರಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ. ಆಸ್ಪತ್ರೆಯ ಆವರಣದಲ್ಲಿ ಸ್ಥಳೀಯರು ಜಾನುವಾರುಗಳನ್ನು ಕಟ್ಟಿಹಾಕುತ್ತಿದ್ದಾರೆ. ಇನ್ನು ಮಳೆ ನೀರಿನಿಂದ ವಿಷ ಜಂತುಗಳ ಹಾವಳಿ ಹೆಚ್ಚಾಗಿದ್ದು, ಜನತೆ ಆತಂಕದಲ್ಲಿದ್ದಾರೆಂದು ಕನ್ನಡ ಸೇನೆಯ ಜಿಲ್ಲಾ ಉಪಾಧ್ಯಕ್ಷ ಮೌನೇಶ ಸುರಪುರ ಆರೋಪಿಸಿದರು.
ಅವ್ಯವಸ್ಥೆ ಸರಿಪಡಿಸಲು ಸೂಚನೆ: ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ, ಸಗರ ಗ್ರಾಮದ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನತೆಗೆ ಅನುಕೂಲವಾಗಲೆಂದು ಸರ್ಕಾರ ಕೋಟ್ಯಂತರ ರು. ಖರ್ಚು ಮಾಡಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದೆ. ಆದರೆ ಆಡಳಿತ ಯಂತ್ರ ಬೇಜಾವ್ದಾರಿತನದಿಂದ ವೈದ್ಯರು, ಸಿಬ್ಬಂದಿ ಮತ್ತು ಔಷಧಿಗಳು ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿಲ್ಲ. ಸಗರ ಗ್ರಾಮದಲ್ಲಿನ ಈ ಆಸ್ಪತ್ರೆಯ ಸ್ಥಿತಿ ನೋಡಿ ನಿಜಕ್ಕೂ ವಿಷಾದ ಉಂಟಾಗುತ್ತಿದೆ. ಇಲ್ಲಿನ ಜನತೆ ಈ ರೀತಿ ಸಮಸ್ಯೆಯಿಂದ ಬಳಲುತ್ತಿರುವುದು ನಿಜಕ್ಕೂ ಶೋಚನೀಯ. ಕೂಡಲೆ ಜಿಲ್ಲಾಡಳಿತ ಆಸ್ಪತ್ರೆಯಲ್ಲಿನ ಸವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಖುದ್ದು ತಾವೇ ಪ್ರತಿಭಟನೆಗಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಂಕ್ರಪ್ಪ ಶಾಣ್ಯನೋರ, ಭೀಮಾಶಂಕರ ಅಣಬಿ ಇತರರು ಇದ್ದರು.