ಇಂದಿನಿಂದ ಗುರುರಾಯರ ಆರಾಧನೆ ಶುರು
ಗುಲ್ಬರ್ಗ: ಗುಲ್ಬರ್ಗದ ಬ್ರಹ್ಮಪುರದ ಪ್ರಾಚೀನ ರಾಘವೇಂದ್ರ ಸ್ವಾಮಿಗಳ ಮಠ ಸೇರಿದಂತೆ ಜೇವರ್ಗಿ ಕಾಲೋನಿ, ಬಿದ್ದಾಪುರ ನಂಜನಗೂಡು ರಾಯರ ಮಠ ಹಾಗೂ ಬಸವೇಶ್ವರ ಕಾಲೋನಿ ಮತ್ತು ಜಗತ್ ವೃತ್ತದಲ್ಲಿರುವ ರಾಯರ ಮಠಗಳಲ್ಲಿ ಗುರುಯಾರ 342ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲು ಭರದ ಸಿದ್ಧತೆಗಳು ಸಾಗಿವೆ.
ಈ ಮಠಗಳಲ್ಲದೆ ಜಿಲ್ಲೆಯ ಅನೇಕ ತಾಲೂಕು ಹಾಗೂ ಪ್ರಮುಖ ಹೋಬಳಿಗಳಲ್ಲಿಯೂ ಗುರುರಾಯರ ಆರಾಧನೆ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನಡೆಯಲಿದೆ. ಸಕಲ ಭಕ್ತರು ಆರಾಧನೆಯಲ್ಲಿ ತನುಮನ ಧನದಿಂದ ಭಾಗವಹಿಸಿ ಗುರುರಾಯರ ಕೃಪೆಗೆ ಪಾತ್ರರಾಗಲಿದ್ದಾರೆ. ಬಿದ್ದಾಪುರ ರಾಘವೇಂದ್ರ ಸ್ವಾಮಿಗಳ ಮಠದಲ್ಲಂತೂ ಆರಾಧನೆ ನಿಮಿತ್ತ 5 ದಿನಗಳ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಿದ್ದಾಪುರ ರಾಯರ ಮಠದಲ್ಲಿ ಆ.20ರಿಂದಲೇ ಧಾನ್ಯಪೂಜೆ ಹಾಗೂ ಸಂಜೆ ಹೊತ್ತಿನ ದಾರ್ಮಿಕ ವಿಧಾನಗಳೊಂದಿಗೆ ವಿದ್ಯುಕ್ತ ಚಾಲನೆ ದೊರಕಿದೆ.
ಬಿದ್ದಾಪುರದಲ್ಲಿ ಆರಾಧನೆ ವೈಭವ: ಬಿದ್ದಾಪುರದಲ್ಲಿರುವ ನಂಜನಗೂಡು ಗುರುರಾಯರ ಮಠದಲ್ಲಿ ಆರಾಧನೆಗೆ ಭರದ ಸಿದ್ಧತೆಗಳು ಸಾಗಿವೆ. ಇದು 342ನೇ ವರ್ಷದ ಆರಾಧನಾ ಮಹೋತ್ಸವ. ಮಠಕ್ಕೆ ಸುಣ್ಣ-ಬಣ್ಣ ಬಳಿಯುವ ಕೆಲಸ ಸಾಗಿದೆ. ರಾಯರ ಆರಾಧನೆಯನ್ನು ಪಂಚ ರಾತ್ರೋತ್ಸವವೆಂದು ವೈಭವದಿಂದ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿಯ ಆರಾಧನೆಯಲ್ಲಿ ಮಧ್ಯಾರಾಧನೆ (ಆ.22, ಗುರುವಾರ) ದಿನ ಬಿದ್ದಾಪುರ ಮಾರುತಿ ಮಂದಿರದಿಂದ ಭಕ್ತರೆಲ್ಲರೂ ಸೇರಿಕೊಂಡು ರಾಯರ ಉತ್ಸವ ಪ್ರತಿಮೆ ರಥದಲ್ಲಿ ಕುಳ್ಳಿರಿಸಿ ಭವ್ಯ ಶೋಭಾಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.