ಮಳೆ ಕೊರತೆ: ಬತ್ತುತ್ತಿದೆ ಕೆರೆ, ಅಂತರ್ಜಲ
ಸುರಪುರ: ರಾಜ್ಯದಲ್ಲಿ ಈಗಾಗಲೇ ಭರ್ಜರಿ ಮಳೆಯಾಗಿದೆ. ಆದರೆ ತಾಲೂಕಿನಲ್ಲಿ ಮಳೆ ಕೊರೆತೆಯಿಂದ ಕೆರೆ, ಬಾವಿಗಳು ಬತ್ತುತ್ತಿವೆ. ವರ್ಷ ಪೂರ್ತಿ ತುಂಬಿ ಹರಿಯುತ್ತಿದ್ದ ಬೋನ್ಹಾಳ ಕೆರೆಯಲ್ಲಿ ನೀರಿನ ಪ್ರಮಾಣ ಸಂಪೂರ್ಣ ಇಳಿಮುಖವಾಗಿದೆ. ತಾಲೂಕಿನ ಇನ್ನುಳಿದ ಕೆರೆಗಳು ಅದಕ್ಕೆ ಹೊರತಾಗಿಲ್ಲ.
ಬೋನ್ಹಾಳ ಕರೆ ನೀರು ಬೋನ್ಹಾಳ ಏತನೀರಾವರಿಗೆ ಉಪಯೋಗಿಸಲಾಗುತ್ತಿದೆ. 15 ಹಳ್ಳಿಗಳ ಕರೆಗಳಲ್ಲಿ ನೀರಿಲ್ಲ: 16 ಸಾವಿರ ಹೆ.ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗುತ್ತದೆ. ಕೆರೆಯಲ್ಲಿ ನೀರಿಲ್ಲದ ಕಾರಣ ಏತ ನೀರಾವರಿಗೆ ಒಳಪಡುವ ಹೊಲಗದ್ದೆಗಳಿಗೆ ಇಲ್ಲಿಯವರೆಗೂ ನೀರಿಲ್ಲದಂತಾಗಿದೆ. ಯಲ್ಲಪ್ಪ ಬಾವಿಯ ಹಿಂದಿನ ಎರಡೂ ಕರೆಗಳಲ್ಲಿ ನೀರಿಲ್ಲ. ಸಿದ್ದನ ಕರೆ ಒಣಗುತ್ತಿದೆ. ಇದೇ ರೀತಿ ತಾಲೂಕಿನ ಇನ್ನುಳಿದ ಕೆರೆಗಳ ಪರಿಸ್ಥಿತಿಯೂ ಯಥಾ ಪ್ರಕಾರವಿದೆ.
ಪ್ರತಿವರ್ಷ ಈ ಕೆರಿಯಲ್ಲಿ ದನ- ಕರು, ಆಡು- ಕುರಿ ಕುಡಿಯಲು ನೀರು ಇರುತ್ತಿತ್ತು. ಹೆಣ್ಮುಕ್ಕಳು ಬಟ್ಟಿನು ತೊಳಿತಿದ್ರು. ಆದರೆ, ಈ ವರ್ಷ ಕೆರಿಯೊಳಗೆ ಗುಬ್ಬಿ ಕುಡಿಲಿಕ್ಕೆ ನೀರಲ್ಲದಂಗ ಆಗೆದ್ರಿ. ನಮ್ಮ ಬೋರ್ವೆಲ್ಗಳಾಗೂ ಹನಿ ನೀರು ಬರತೀಲ್ಲ ಎಂದು ರೈತರು ಮತ್ತು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಅಂತರ್ಜಲ ಕುಸಿತ: ಮಳೆಗಾಲದಲ್ಲಿಯೇ ಕೆರೆಗಳು ಸಂಪೂರ್ಣ ಒಣಗಿದ್ದರಿಂದ ರೈತರು ಮತ್ತು ಸಾರ್ವಜನಿಕರು ಕಂಗಾಲಾಗಿದ್ದಾರೆ. ಬಾವಿಗಳು ಬತ್ತಿವೆ. ಕೊಳವೆ ಬಾವಿಗಳು ಅಂತರ್ಜಲ ಮಟ್ಟದ ಕುಸಿತದಿಂದ ನೀರು ಬರುತ್ತಿಲ್ಲ. ಸಾಕಷ್ಟು ಕೆರೆಗಳಲ್ಲಿ ಹೂಳು ತುಂಬಿದ್ದರಿಂದ ನೀರು ನಿಲ್ಲದೆ ಅವು ಬೇಗನೆ ಒಣಗಲು ಇದು ಮತ್ತೊಂದು ಕಾರಣವಾಗಿದೆ.
ನಾಮಫಲಕ ಹಾಕಿ: ಸರ್ಕಾರ ಕೆರೆಗಳ ಏರಿ ಬಲಪಡಿಸುವುದು, ಹೂಳು ತೆಗೆಯಲು ಹಾಗೂ ಕಾಲುವೆಗಳ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಿದೆ. ಆದರೆ ಸಾರ್ವಜನಿಕರ ನಿರ್ಲಕ್ಷ್ಯತೆಯಿಂದ ಅನುದಾನದ ಸದ್ಬಳಕೆಯಾಗುತ್ತಿಲ್ಲ ಎಂಬ ಆರೋಪವಿದೆ. ಕೆರೆಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡುವ ಅನುದಾನ ಮತ್ತು ಯೋಜನೆಯ ವಿವರವು ಸಾರ್ವಜನಿಕರಿಗೆ ಗೊತ್ತಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಮುಂದೆ ನಾಮಫಲಕ ಹಾಕಿ ತಿಳಿಸಬೇಕಾಗಿದೆ.
ಮಳೆಯಿಲ್ಲದ ಕಾರಣ ಹೂಳೆತ್ತಲು ಈ ಸಮಯ ಸಕಾಲವಾಗಿರುವುದರಿಂದ ಗ್ರಾಪಂ ಹಾಗೂ ತಾಪಂ ಮುತುವರ್ಜಿ ವಹಿಸಿ ಕೆರೆ ಹೂಳೆತ್ತಿ ನೀರು ನಿಲ್ಲುವಂತೆ ಮಾಡಿದರೆ ಮುಂಬರುವ ದಿನಗಳಲ್ಲಿ ನೀರು ಶೇಖರಣೆ ಹೆಚ್ಚು ಜಾಗ ಸಿಗುತ್ತದೆ ಮತ್ತು ಸಾಕಷ್ಟು ದಿನಗಳವರೆಗೂ ಕೆರೆಗಳಲ್ಲಿ ನೀರು ಉಳಿದುಕೊಳ್ಳುತ್ತದೆ. ಕಾರಣ ಕೂಡಲೇ ಕೆರೆ ಹೂಳೆತ್ತಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಳೆದ 20 ವರ್ಷಗಳ ಹಿಂದೆ ಹಳ್ಳ- ಕೊಳ್ಳದಲ್ಲಿ ಕೈಯಲ್ಲಿ ಮರಳನ್ನು ತೆಗೆದರೆ ಸಾಕು ನೀರು ಬರುತ್ತಿತ್ತು. ಇದೇ ನೀರನ್ನು ಕುಡಿಯುತ್ತಿದ್ದರು. ಅಂತಹ ಸಮೃದ್ಧಿ ಕಾಲ ಅದಾಗಿತ್ತು, ಆಗ ಉತ್ತಮ ಮಳೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಮಾಡಿದ್ದರಿಂದ ಬರಗಾಲ ಎದುರಿಸುವಂತಾಗಿ ನೂರಾರು ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ಪ್ರಕೃತಿಯ ವಿರುದ್ಧ ನಾವು ನಡೆದುಕೊಳ್ಳುತ್ತಿರುವ ವರ್ತನೆಯ ಪರಿಣಾಮ ಇದಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೆರೆಗಳಲ್ಲಿ ನೀರು ನಿಲ್ಲಿಸಿ, ಸಂರಕ್ಷಣೆ ಮಾಡಿಕೊಳ್ಳುವ ಅಗತ್ಯವಿದೆ.
ಮಲ್ಲು ಗುಳಗಿ