ಹೋಳಿಗೆ ಊಟ ಸವಿದ ಅನಾಥ ಮಕ್ಕಳು
ಜೇವರ್ಗಿ: ಶ್ರಾವಣ ಮಾಸದ ಎರಡನೇ ಸೋಮವಾರದಂದು ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಶಿವಾನಂದ ಶಿವಯೋಗಿ ಗ್ರಾಮೀಣ ಕಲ್ಯಾಣ ಸಂಸ್ಥೆಯಡಿಯಲ್ಲಿ ಓದುತ್ತಿರುವ ಮಕ್ಕಳಿಗೆ ಶಿವಾನಂದ ಶ್ರೀಗಳು ಹೋಳಿಗೆ ತುಪ್ಪತೂಟ ಮಾಡಿಸಿದರು.
ಶ್ರಾವಣ ಮಾಸ ಹಿಂದೂ ಧರ್ಮಿಯರಿಗೆ ಪವಿತ್ರ ಮಾಸ. ಇಂತಹ ತಿಂಗಳಿನಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಪೂಜೆಗಳು ನಡೆಯುತ್ತವೆ. ಜೊತೆಗೆ ಹೋಳಿಗೆ ತುಪ್ಪದೂಟವು ಇರುತ್ತವೆ. ಆದರೆ ಸೊನ್ನದ ಶಿವಾನಂದ ಮಹಾಸ್ವಾಮಿ ನಡೆಸುತ್ತಿರುವ ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆ ಅಡಿ ಓದುತ್ತಿರುವ ಮಕ್ಕಳು ಹಬ್ಬದೂಟದಿಂದ ವಂಚಿತವಾಗಬಾರದು. ಅವರಲ್ಲಿ ನಾನು ಅನಾಥ, ಬಡವ ಎನ್ನುವ ಅಳುಕು ಇರಬಾರದು. ಅದರ ಕೊರಗು ನೀಗಿಸಲೆಂದೆ ಶಿವಾನಂದ ಶ್ರೀಗಳು ಈ ಮಕ್ಕಳಿಗೆ ನಡುವಿನ ಸೋಮವಾರ ಸಂಸ್ಥೆಯ ಅಡಿಯ ಸಾವಿರಾರು ಶಾಲಾ ಮಕ್ಕಳಿಗೆ ಶಾಲೆಯ ಆವರಣದಲ್ಲಿ ಹೋಳಿಗೆ ತುಪ್ಪದೂಟ ಸಾಮೂಹಿಕವಾಗಿ ಬಡಿಸಿ ಊಟ ಮಾಡಿಸಿದರು.
ಚಾಲನೆ: ಶ್ರೀಗಳು ಊಟಕ್ಕೆ ಮುನ್ನ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಬೋಧಿಸಿದರು. ತಾವೇ ಖುದ್ದಾಗಿ ಮಕ್ಕಳಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದರು. ಸೊನ್ನದ ಮಠ ಅನ್ನದ ಮಠ ಎನ್ನುವ ಪ್ರಖ್ಯಾತಿ ಪಡೆದಿದೆ. ಇದರ ಜೊತೆಗೆ ಶಿವಾನಂದ ಮಹಾಸ್ವಾಮೀಜಿ ಹತ್ತಾರು ವರ್ಷದ ಹಿಂದೆ ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆ ಸ್ಥಾಪಿಸಿ ಇಲ್ಲಿ ಸಂಸ್ಥೆಯ ಹೆಸರು ಗ್ರಾಮೀಣ ಜನಕಲ್ಯಾಣ, ಅದರಂತೆ ಗ್ರಾಮೀಣ ಪ್ರದೇಶದ ಬಡ ಹಾಗೂ ಅನಾಥ ಮಕ್ಕಳಿಗೆ ಶಿಕ್ಷಣ ಒದಗಿಸುವ ಮೂಲಕ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಸಂಕಲ್ಪ ಹೊಂದಿ ಜ್ಞಾನದ ದಿವಿಗೆ ಹೊತ್ತಿಸಿದ್ದಾರೆ.
ಈ ಮುಂಚೆ ಜನೇವರಿ ತಿಂಗಳಿನಲ್ಲಿ ಶ್ರೀಗಳು ತಮ್ಮ ಜನ್ಮ ದಿನವನ್ನು ಸಮಾಜೋತ್ಸವ ಕಾರ್ಯಕ್ರಮ ಮಾಡುವ ಮೂಲಕ ಶರಣ ಸಂಸ್ಕೃತಿ ಉತ್ಸವ ನಡೆಸಿ ಶರಣರ ವಚನಗಳು ಬಿತ್ತರಿಸಿದ್ದರು.