ಅಕ್ಷರಕ್ಕಿಂತ ಅನುಭವ ಜ್ಞಾನ ದೊಡ್ಡದು: ಸೋಮಶೇಖರ
ಶಹಾಪುರ: ಶಿಕ್ಷಣದಲ್ಲಿ ಎಷ್ಟು ಅಂಕಗಳು ಪಡೆದೆ ಎನ್ನುವುದಕ್ಕಿಂತ ಮುಖ್ಯವಾಗಿ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಅಂಕ ಪಡೆದುಕೊಂಡಿದ್ದೇನೆ ಎಂದು ಅರಿತುಕೊಂಡು ವ್ಯಕ್ತಿತ್ವದ ಮೂಲಕ ಸಮಾಜವನ್ನು ಕಟ್ಟಿಕೊಡುವ ಶಿಕ್ಷಣ ಹುಟ್ಟುಹಾಕಬೇಕಾಗಿದೆ. ಮಾನವೀಯ ಹಾಗೂ ನೈತಿಕತೆ ಆಧಾರದ ಮೇಲೆ ಸಾಮಾಜಿಕ ಪರಿವರ್ತನೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯವೆಂದು ಡಾ. ಅಪ್ಪುಗೇರೆ ಸೋಮಶೇಖರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2013-14ನೇ ಸಾಲಿನ ಸಾಹಿತ್ಯ ಸಾಂಸ್ಕೃತಿಕ, ಪಠ್ಯೇತರ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನಾವೆಲ್ಲ ನಿಸರ್ಗ ಪ್ರೀತಿಸುವುದರಿಂದ ಪರಿಸರ ಜ್ಞಾನ ತಾನಾಗಿ ಬರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಗುರು ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಕನಸು ಕಟ್ಟಬೇಕು. ನಾಲ್ಕು ಗೋಡೆಯ ಮಧ್ಯೆ ಇರದೇ ಹೊರಗಡೆ ಕಲಿಯುವುದು ಬಹಳಷ್ಟಿದೆ. ಯಾರು ಸಾಂಸ್ಕೃತಿಕವಾಗಿ ಜೀವಂತವಾಗಿರುತ್ತಾರೋ ಅವರೇ ಶಾಶ್ವತವಾಗಿ ಸಮಾಜದಲ್ಲಿ ಉಳಿಯುತ್ತಾರೆಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಂಕ್ರಪ್ಪ ಗುಳಬಾಳ, ಪ್ರಾಚಾರ್ಯ ಎಂ.ಪಿ. ಸಾಸನೂರ ಇದ್ದರು. ಶಕುಂತಲಾ ನಿರೂಪಿಸಿ ಎಂ.ಎಸ್. ಸಜ್ಜನ್ ಸ್ವಾಗತಿಸಿ ಗುರುಲಿಂಗಪ್ಪ ವಂದಿಸಿದರು.