ತೊಗರಿ ಹೊಲ ಮಾರಲು ಗುಲ್ಬರ್ಗ ರೈತರ ಆತುರ
ಕ.ಪ್ರ.ವಾರ್ತೆ, ಗುಲ್ಬರ್ಗ, ಆ. 22-
ಉತ್ತಮ ಬೆಲೆ ನೀಡಿದರೆ ಸಿಮೆಂಟ್ ಕಂಪನಿಗಳಿಗೆ ಭೂಮಿ ನೀಡಲು ತೊಗರಿ ಕಣಜ ಗುಲ್ಬರ್ಗ ರೈತರು ತುದಿಗಾಲ ಮೇಲೆ ನಿಂತಂತಿದೆ.
ಗುಲ್ಬರ್ಗ ತಾಲೂಕಿನ ಭೀಮಾ ತೀರದಲ್ಲಿ 2,000 ಎಕರೆ ಭೂಮಿಯಲ್ಲಿ, 19 ಸಾವಿರ ಕೋಟಿ ವೆಚ್ಚದಲ್ಲಿ ಸಿಮೆಂಟ್ ಘಟಕ ಸ್ಥಾಪಿಸಲು ಮುಂದಾಗಿರುವ ಮೇಸರ್ಸ್ ಗುಲ್ಬರ್ಗ ಸಿಮೆಂಟ್ ಕಂಪನಿ ಭೂ ಖರೀದಿಗೆ ಸಂಬಂಧಿಸಿದಂತೆ ರೈತರೊಂದಿಗೆ ಗುರುವಾರ ನಡೆಸಿದ ಸಭೆ ಇದಕ್ಕೆ ಪುಷ್ಠಿ ನೀಡಿತು.
ಈಗಾಗಲೇ ಶಾಖೋತ್ಪನ್ನ ಸ್ಥಾವರಕ್ಕೆಂದು 2009-10ರಲ್ಲಿ 1,600 ಎಕರೆ ಭೂಮಿ ಸ್ವಾಧೀನವಾಗಿರುವ ಗುಲ್ಬರ್ಗದಲ್ಲಿ ಶೀಘ್ರವೇ ಇನ್ನೂ 2 ಸಾವಿರ ಎಕರೆ ಫಲವತ್ತಾಗಿರುವ ಕೃಷಿ ಭೂಮಿ ಸಿಮೆಂಟ್ ಕಂಪನಿ ಸ್ಥಾಪನೆಗೆ ಹಸ್ತಾಂತರವಾಗಲಿದೆ.
ಜುವಾರಿ ಸಮೂಹ ಸಂಸ್ಥೆ ಮೆ.ಗುಲ್ಬರ್ಗ ಸಿಮೆಂಟ್ ಕಂಪನಿ ಹೆಸರಲ್ಲಿ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಇಕ್ಕೆಲದಲ್ಲಿ ಹರಡಿಕೊಂಡಿರುವ ಹೊನ್ನಕಿರಣಗಿ, ಫಿರೋಜಾಬಾದ್ ಹಾಗೂ ಸೋಮನಾಥಹಳ್ಳಿ ಸೀಮೆಯ 2 ಸಾವಿರ ಎಕರೆ ಭೂಮಿ ಖರೀದಿಗೆ ಮುಂದಾಗಿದೆ.
ಸಭೆಯಲ್ಲಿ ಭೂ ಬೆಲೆ ತೀರ್ಮಾನವಾಗುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ, ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಡಿಸಿ ಪ್ರಸನ್ನಕುಮಾರ್ ಇನ್ನು 3-4 ವಾರದೊಳಗೆ ಬೆಲೆ ಘೋಷಿಸುವುದಾಗಿ ಹೇಳಿದಾಗ, ತಡವ್ಯಾಕೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಈಗಾಗಲೇ ಶೇ.50ರಷ್ಟು ಸೇಲ್ ಡೀಡ್: ಗುಲ್ಬರ್ಗ ಸಿಮೆಂಟ್ ಕಂಪನಿ ಈಗಾಗಲೇ ಶೇ.50ಕ್ಕೂ ಅಧಿಕ ರೈತರನ್ನು ಸಂಪರ್ಕಿಸಿ ಎಕರೆಗೆ 9 ಲಕ್ಷದಂತೆ (ಉಷ್ಣ ಸ್ಥಾವರಕ್ಕೆ ನಿಗದಿಯಾದ ಬೆಲೆ ಇದು) ಭೂಮಿ ಖರೀದಿಗೆ ಸೇಲ್ ಡೀಡ್ ಮಾಡಿಕೊಂಡಿದೆ.
ಗುಲ್ಬರ್ಗ ಸಿಮೆಂಟ್ ಕಂಪನಿ ನಿರ್ದೇಶಕ ಡಾ.ರಮೇಶ್ ಸಭೆಯಲ್ಲಿ ಮಾತನಾಡಿ, ಶೇ.50ಕ್ಕೂ ಹೆಚ್ಚು ರೈತರಿಗೆ ಸೇಲ್ ಡೀಡ್ ಮಾಡಿಕೊಂಡು 4 ಲಕ್ಷದಂತೆ 46 ಕೋಟಿ ಹಣ ಪಾವತಿಸಲಾಗಿದೆ. ಆರಂಭದಲ್ಲಿ 11 ಸಾವಿರ ಕೋಟಿ ಹೂಡಿಕೆಯಲ್ಲಿ ಸಿಮೆಂಟ್ ಕಂಪನಿ ಸ್ಥಾಪಿಸುವ ಯೋಜನೆ ರೂಪಿಸಲಾಗಿತ್ತು, ಇದೀಗ 19 ಸಾವಿರ ಕೋಟಿ ಹೂಡಿಕೆ ಮಾಡಿ ಕಂಪನಿ ಸ್ಥಾಪನೆಗೆ ಉದ್ದೇಶಿಸಲಾಗಿದ್ದು ರೈತರು, ಜಿಲ್ಲಾಡಳಿತದ ಸಹಕಾರ ಕೋರಿದರು.
ಫಲವತ್ತಾದ ಭೂಮಿಗೆ ಎಕರೆಗೆ 45 ಲಕ್ಷದಂತೆ ಬೆಲೆ ಕೊಡ್ರಿ, ಇವತ್ತೇ ದಾಖಲೆಪತ್ರ ಮಾಡಿಕೊಡುತ್ತೇವೆ ಎಂದಾಗ ಕಂಪನಿ ರೈತರು ಹೀಗೆ ದುಬಾರಿ ಬೆಲೆ ಕೇಳಿದರೆ ಕಂಪನಿ ಗುಲ್ಬರ್ಗಕ್ಕೆ ಬರುವುದೇ ದುಸ್ತರವಾಗಲಿದೆ ಎಂದರು.
ಎರಡೂವರೆ ಗಂಟೆ ಅವಧಿ ಸುದೀರ್ಘವಾಗಿ ನಡೆದ ಸಭೆಯಲ್ಲಿ ಮಾತನಾಡಿದ 20ಕ್ಕೂ ಹೆಚ್ಚು ರೈತರು, ರೈತ ಪ್ರತಿನಿಧಿಗಳು, ಭೂ ಮಾಲೀಕ ವಕೀಲರು, ಸಮಾಜ ಸೇವಕರೆಲ್ಲರೂ ಉತ್ತಮ ಬೆಲೆ ಕೊಡೋದಾದ್ರೆ ಭೂಮಿ ಕೊಟ್ಟುಬಿಡ್ತೇವೆ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು.
ಇಡಿ ಸಭೆಯಲ್ಲಿ ಫಿರೋಜಾಬಾದ್ನ ಲತೀಫ್ ಪಟೇಲ್ ಎಂಬವರು ಮಾತ್ರ ಫಲತ್ತಾದ ಭೂಮಿ ಕೊಡೋ ಮನಸ್ಸಿಲ್ಲ ಎಲ್ರೂ ಮಾರಲು ನಿಂತ ಮೇಲೆ ತಾವೋಬ್ಬರೇ ವಿರೋಧಿಸಿದ್ರೆ ಅದಕ್ಕೆ ಮಹತ್ವ ಬಾರದು ಎಂದು ವಿಷಾದಿಸಿದ್ದು ಬಿಟ್ರೆ ಯಾರಿಂದಲೂ ಭೂಮಿ ಮಾರುವ ವಿಚಾರದಲ್ಲಿ ಸಣ್ಣ ವಿರೋಧವೂ ವ್ಯಕ್ತವಾಗಲಿಲ್ಲ.
ಸಭೆಯ ನಂತರ ರೈತರು ಎಲ್ಲರೂ ತಮ್ಮ ಭೂಮಿಗೆ ಜಿಲ್ಲಾಡಳಿತ ನಿಗದಿಪಡಿಸುವ ಬೆಲೆ ಎಷ್ಟಾಗಿರಬಹುದು ಎಂಬ ತರ್ಕಕ್ಕೆ ಇಳಿದಿದ್ದರು.
ಭೂಮಿ ಮಾರೋದು ನಿರ್ಧರಿಸಿದ್ದಾಗಿದೆ. ಬೆಲೆ ತುಸು ವೈನಾಗಿ ಕೊಟ್ರೆ ಪಾಡೈತಿ. ಎಂದು ಅನೇಕ ರೈತರು 'ಕನ್ನಡಪ್ರಭ'ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.