ಬಸ್ನಿಲ್ದಾಣದಲ್ಲಿ ಬತ್ತ ನಾಟಿ ಮಾಡಿ ಪ್ರತಿಭಟನೆ
ಸುರಪುರ: ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಜಾಲಿಬೆಂಚಿ ಗ್ರಾಮದ ಬಸ್ತಂಗುದಾಣ ಸಂಪೂರ್ಣ ಕೆಸರು ಗದ್ದೆಯಂತಾಗಿದೆ ಎಂದು ಆರೋಪಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಬಸ್ ತಂಗುದಾಣದ ಆವರಣದಲ್ಲಿ ಮಂಗಳವಾರ ಬತ್ತದ ಸಸಿಗಳನ್ನು ನಾಟಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಕುಂಬಾರ ಮಾತನಾಡಿ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಜಿಟಿ ಮಳೆಯಿಂದ ಗ್ರಾಮದ ಬಸ್ ತಂಗುದಾಣ ಮತ್ತು ಗ್ರಾಮದ ಗಲ್ಲಿಗಲ್ಲಿಗಳು ಸಂಪೂರ್ಣ ಗಬ್ಬೆದು ನಾರುತ್ತಿವೆ. ಗ್ರಾಮದಲ್ಲಿ ಮತ್ತು ಬಸ್ನಿಲ್ದಾಣದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ತಾಲೂಕು ಅಧಿಕಾರಿಗಳಿಗೂ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಮೌನವಹಿಸಿದ್ದಾರೆಂದು ಆರೋಪಿಸಿದರು.
ಕೊಳಚೆ ನೀರು: ಗ್ರಾಮದಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಊರಿನ ಸಂಪೂರ್ಣ ಕೊಳಚೆ ನೀರು ಹಾಗೂ ಮಲಮೂತ್ರಗಳು ಹರಿದು ಬಂದು ನಿಲ್ದಾಣದ ಆವರಣದಲ್ಲಿ ಜಮಾವಣೆಯಾಗುತ್ತದೆ. ಇದರಿಂದ ಆವರಣ ಗಬ್ಬೆದ್ದು ನಾರುತ್ತಿದೆ. ಇದು ಗ್ರಾಮಕ್ಕೆ ಮುಖ್ಯ ರಸ್ತೆಯಾಗಿರುವುದರಿಂದ ಪ್ರತಿ ವಾಹನಗಳು ಜನರು ಇಲ್ಲಿಂದಲೇ ಹಾದು ಹೋಗಬೇಕು. ಕೆಟ್ಟ ವಾಸನೆಯಿಂದ ಮೂಗು ಮುಚ್ಚಿಕೊಂಡು ಹಾಗೂ ರಾಡಿಯಲ್ಲಿ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ದೂರಿದರು.
ಸಾಂಕ್ರಾಮಿಕ ರೋಗಗಳ ಭೀತಿ: ನಿಲ್ದಾಣದಲ್ಲಿ ಹೊಲಸು ಕೆಸರು ಮತ್ತು ಕೊಚ್ಚೆ ನೀರು ಸಂಗ್ರಹವಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದ ಸುತ್ತಮುತಲ್ಲಿನ ಮನೆಗಳಲ್ಲಿ ವಾಸಿಸುವವರಿಗೆ ತೀವ್ರ ತೊಂದರೆಯಾಗಿದೆ. ನೀರು ನಿಂತಲ್ಲೆ ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ಕಾರಣ ಕೂಡಲೇ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು ಮತ್ತು ನಿಲ್ದಾಣದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಚಳವಳಿಯ ಎಚ್ಚರಿಕೆ: ವಾರದಲ್ಲಿ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಗ್ರಾಮಸ್ಥರೊಂದಿಗೆ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು ಅಮ್ಮಾಪುರ ಬಳಿ ರಸ್ತಾ ರೋಖೋ ಚಳವಳಿ ಮಾಡಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಪಂ ಕಾರ್ಯದರ್ಶಿಗೆ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಸವರಾಜ ಸಾಹುಕಾರ, ನಾಗರಾಜ ನಾಯಕ, ಹಸನಬಾಷಾ, ರಾಮಪ್ಪನಾಯಕ ಜೇಜಿ, ಮಾಸುಮ್ ಸಾಬ್ ತಿಂಥಣಿ, ಬಸವರಾಜ ಕುಂಬಾರ, ಹುಸೇನಬಿ ಮುಲ್ಲಾ, ಅಂಬ್ರಮ್ಮ ಮರಾಠ, ದೇವಪ್ಪ ನಬೀಲಾಲ್ ಮುಲ್ಲಾ, ನಾಗಪ್ಪ ಬಳಿಗಾರ, ಕೃಷ್ಣಪ್ಪ ನಾಯಕ, ಮಲ್ಕಪ್ಪ ಕಟ್ಟಿಮನಿ ಇತರರಿದ್ದರು.