ವ್ಯಕ್ತಿಯ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಶಾಸಕ
ಯಾದಗಿರಿ: ಸದೃಢ ಶರೀರದಲ್ಲಿ ಸದೃಢ ಮನಸ್ಸು ಇರುತ್ತದೆ. ಆದ್ದರಿಂದ ಆರೋಗ್ಯವಂತರಾಗಿದ್ದಲ್ಲಿ ಮಾತ್ರ ಸಾಧನೆ ಸಾಧ್ಯ. ಕ್ರೀಡೆ ಪ್ರತಿಯೊಬ್ಬರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಶಾಸಕ ಡಾ. ಎ.ಬಿ ಮಾಲಕರಡ್ಡಿ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಯಾದಗಿರಿ ವಲಯ ಮಟ್ಟದ ಕ್ರೀಡಾಕೂಟವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಜನೆ ಜತೆಗೆ ಕ್ರೀಡಾಪಟುಗಳಾಗಲು ಬಾಲ್ಯದಿಂದಲೇ ಕಠಿಣ ಶ್ರಮವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್ ಹುಸೇನ್, ಕ್ರೀಡಾಪಟುಗಳು ಪ್ರಾಮಾಣಿಕ ಹಾಗೂ ತಾಳ್ಮೆಯ ಗುಣ ಹೊಂದಿರಬೇಕು. ಸತತ ಪರಿಶ್ರಮ, ಸಮಾಧಾನ ಮತ್ತು ಸಹನೆಯಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು. ಇಂಥ ಅಂಶಗಳನ್ನು ಕ್ರೀಡಾಪಟುಗಳು ಅಳವಡಿಸಿಕೊಂಡರೆ ಮಾತ್ರ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.
ಜಿಪಂ ಸಮಾಜಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಅಯ್ಯಾಳಪ್ಪ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಯುವಜನ ಸೇವಾ ಇಲಾಖೆಯ ಸಹಾಯ ನಿರ್ದೇಶಕ ಸೂಗಪ್ಪ ಪಾಟೀಲ್, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡರಕಿ, ನಗರಸಭೆ ಸದಸ್ಯ ಶಶಿಧರ ರೆಡ್ಡಿ ಹೊಸಳ್ಳಿ, ಮರೆಪ್ಪ ಮ್ಯಾಗೇರಿ, ಯಂಕಪ್ಪ ದೊಡ್ಡಮನಿ, ಶಿಕ್ಷಕರ ಸಂಘದ ಉಪಾಧ್ಯಕ್ಷ ಆಶಪ್ಪ ಗಾಜರಕೋಟ್ ಇದ್ದರು.
ದೈಹಿಕ ಶಿಕ್ಷಣಾದಿಣಾಧಿಕಾರಿ ಶಂಕರ ಸೋನಾರ್ ಸ್ವಾಗತಿಸಿದರು. ಶಿಕ್ಷಕ ಮನೋಹರ್ ನಿರೂಪಿಸಿದರು. ಚಂದ್ರಗೌಡ ವಂದಿಸಿದರು.