ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಮಠ ಆಧ್ಯಾತ್ಮಿಕ ಕೇಂದ್ರವಷ್ಟೇ ಅಲ್ಲ, ನೆಮ್ಮದಿ ತಾಣ'

Lingaraj Badiger
Updated On : 23 Aug 2013, 11:17 am

ಕೆಂಭಾವಿ: ಪ್ರಸ್ತುತ ಸಂದರ್ಭದಲ್ಲಿ ಮಠ-ಮಾನ್ಯಗಳು ಧಾರ್ಮಿಕ ಚಿಂತನೆಯ ಜತೆಗೆ ಸಮಾಜಮುಖಿ ಕಾರ್ಯ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಿರುವುದು ಸಂತಸದ ವಿಷಯ. ಆ ನಿಟ್ಟಿನಲ್ಲಿ ಮಠಗಳು ಆಧ್ಯಾತ್ಮಿಕ ಕೇಂದ್ರಗಳಷ್ಟೇ ಅಲ್ಲದ್ದೇ ಅವು ನೆಮ್ಮದಿಯ ತಾಣಗಳೂ ಆಗಿವೆ ಎಂದು ವೀರಶೈವ ಪರಿಷತ್ ಜಿಲ್ಲಾಧ್ಯಕ್ಷ ಸಂಗನಗೌಡ ಪಾಟೀಲ ವಜ್ಜಲ್ ನುಡಿದರು.
ಸಮೀಪದ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ನೂಲ ಹುಣ್ಣಿಮೆ ನಿಮಿತ್ತ ಏರ್ಪಡಿಸಿದ್ದ 121ನೇ ಶಿವಾನುಭವಗೋಷ್ಠಿ ಹಾಗೂ ಸದ್ಭಾವನಾ ಪಾದಯಾತ್ರೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಗರನಾಡು ಧಾರ್ಮಿಕ ತಾಣಗಳ ತವರೂರು. ವಚನ ಸಾಹಿತ್ಯದ ಉಗಮ ಈ ನೆಲದಲ್ಲಿ ಆಗಿದೆ. ಇದೇ ನೆಲದಲ್ಲಿ ಅನೇಕ ಸಂತ, ಶರಣರು, ದಾರ್ಶನಿಕರು ಜನಿಸಿದ್ದಾರೆ. ಹಾಗಾಗಿ, ಈ ನೆಲದಲ್ಲಿ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತದೆ. ಅದಕ್ಕೆ ಪೂರಕವೆನ್ನುವಂತೆ ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ 12 ವರ್ಷಗಳಿಂದ ಪ್ರತಿ ಹುಣ್ಣಿಮೆಯ ಪ್ರಯುಕ್ತ ಮಾಸಿಕ ಶಿವಾನುಭವಗೋಷ್ಠಿ ಆಯೋಜಿಸಿ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ, ಅಕ್ಷರ ದಾಸೋಹ ಅಧಿಕಾರಿ ಚಂದ್ರಕಾಂತ ಕೊಣ್ಣೂರ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಮಠದ ಶಾಂತರುದ್ರಮುನಿ ಸ್ವಾಮೀಜಿ ವಹಿಸಿದ್ದರು. ಮುದುನೂರಿನ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೇಠ ಅಮ್ಮಾಪುರದ ಶ್ರೀರಾಮಶರಣರು, ಖೈರಾವಡಿಗಿಯ ಶರಣಪ್ಪ ಶರಣರು ಸೇರಿದಂತೆ ಅನೇಕ ಮಠಾಧೀಶರು, ಚಿಂತಕರು ಭಾಗವಹಿಸಿದ್ದರು. ಮಲ್ಲಯ್ಯ ಸ್ವಾಮಿ ಪರಸನಳ್ಳಿ ನಿರೂಪಿಸಿದರು. ಶಿವಪ್ರಕಾಶ ಸ್ವಾಗತಿಸಿದರು, ಕೃಷ್ಣ ನಾಟೇಕರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement