ಮಾಹಿತಿಯೊಂದಿಗೆ ಸಭೆಗೆ ಹಾಜರಾಗಲು ತಾಕೀತು
ಕನ್ನಡಪ್ರಭ ವಾರ್ತೆ, ಅಫಜಲ್ಪುರ, ಆ.22
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕಿನ ಅಧಿಕಾರಿಗಳು ಪ್ರಗತಿಯ ವರದಿಯನ್ನು ಸರಿಯಾಗಿ ಸಲ್ಲಿಸದೇ ಇರುವುದನ್ನು ಕಂಡು ತಾಪಂ ಸದಸ್ಯರು ಗರಂ ಆದ ಸನ್ನಿವೇಶ ನಡೆಯಿತು.
ಸಭೆ ಪ್ರಾರಂಭಗೊಂಡ ನಂತರ ಪ್ರಥಮವಾಗಿ ತಾಪಂ ಸದಸ್ಯ ಸಾ.ಶಿ. ಬೆನಕನಳ್ಳಿ ಜಿಪಂ ಎಇಇ ಶರಣಬಸಪ್ಪ ಅವರಿಗೆ ಮಣ್ಣೂರ ಗ್ರಾಮಕ್ಕೆ ಶುದ್ಧ ಕುಡಿವ ನೀರು ಕಲ್ಪಿಸುವ ಸಲುವಾಗಿ ಫೀಲ್ಟರ್ ಬಿಡ್ ಕಾಮಗಾರಿಯನ್ನು ಬೇಗ ಮುಗಿಸುವಂತೆ ಹೇಳಿದರು. ಅದಕ್ಕೆ ಸ್ಪಂದಿಸಿದ ಅಧಿಕಾರಿ ಶರಣಬಸಪ್ಪ ಕೂಡಲೇ ಮುಗಿಸುವುದಾಗಿ ಹೇಳಿದರು.
ಚೀಟಿ ಸಿಗುವಂತೆ ಕ್ರಮ: ತಾಲೂಕಿನ ಎಲ್ಲ ಗ್ರಾಮ ನಿವಾಸಿಗಳಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿಗಳು ದೊರಕುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಬೆನಕನಳ್ಳಿ ಅವರಿಗೆ ತಾಪಂ ಸದಸ್ಯ ದತ್ತು ಸಿಂಧೆ ಧ್ವನಿಗೂಡಿಸಿದರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಎಂ. ಚಂದ್ರಶೇಖರ ಈ ಕುರಿತು ಸಂಪೂರ್ಣ ತನಿಖೆ ನಡೆಸಿ ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಡಿತರ ಚೀಟಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
3-4 ದಿನವಾದರೂ ಕಾರ್ಯ ನಿರ್ವಹಿಸಿ: ತಾಲೂಕಿನ 22 ಗ್ರಾಪಂಗಳಿದ್ದು, ಪ್ರತಿ ಗ್ರಾಪಂನ ಪಿಡಿಒಗಳು ಮತ್ತು ಕಾರ್ಯದರ್ಶಿಗಳು ಆಯಾ ಪಂಚಾಯ್ತಿ ಕಚೇರಿಯಲ್ಲಿ ಕನಿಷ್ಠ ವಾರಕ್ಕೆ 3-4 ದಿನವಾದರೂ ಗ್ರಾಪಂ ಕೇಂದ್ರದಲ್ಲಿದ್ದು ಕಾರ್ಯ ನಿರ್ವಹಿಸುವಂತೆ ಆದೇಶ ನೀಡಿ ಎಂದು ತಾಪಂ ಸದಸ್ಯ ಸಾ.ಶಿ. ಬೆನಕನಳ್ಳಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಎಸ್.ಪಿ. ನಂದಗಿರಿ ಅವರಿಗೆ ಹೇಳಿದರು. ಸಮಸ್ಯೆ ಬಗೆಹರಿಸುವುದಾಗಿ ತಾಪಂ ಅಧಿಕಾರಿ ನಂದಗೇರಿ ಸಭೆಗೆ ತಿಳಿಸಿದರು.
ಕರಜಗಿ ಸರ್ಕಾರಿ ಶಾಲೆಗೆ ನೇರವಾಗಿ ಪೈಪ್ಲೈನ್ ಮುಖಾಂತರ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದ್ದು, ಇದಕ್ಕೆ ಕೂಡಲೇ ಸ್ಪಂದಿಸಬೇಕೆಂದು ತಾಪಂ ಸದಸ್ಯೆ ಅಕ್ಕಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪರಿಹಾರದ ಚೆಕ್ ವಿತರಿಸಿ: ಗೌರ ಬಿ.ಯಲ್ಲಿ ಟಿಸಿ ಬೇರೆ ಕಡೆ ಕೂಡಿಸುವಂತೆ ಸದಸ್ಯೆ ಸುಜ್ಞಾನಿಬಾಯಿ ಸಭೆಯಲ್ಲಿ ಆಗ್ರಹಿಸಿದರು. ಜೆಸ್ಕಾಂ ಎಇಇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಸಾ.ಶಿ. ಬೆನಕನಳ್ಳಿ ಬರ ಪರಿಹಾರದ ಚೆಕ್ ಸಣ್ಣ ರೈತರಿಗೆ ವಿತರಿಸುವಂತೆ ಸಭೆಯಲ್ಲಿ ಆಗ್ರಹಿಸಿದರು. ಶೀಘ್ರದಲ್ಲಿ ವಿತರಿಸಲಾಗುವುದು ಎಂದು ಉಪ ತಹಸೀಲ್ದಾರ್ ಎಂ. ಚಂದ್ರಶೇಖರ ತಿಳಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಗಂಗಾಬಾಯಿ ಜಮಾದಾರ, ಸದಸ್ಯರಾದ ಹುಣಚಪ್ಪ ಅಂತರಗಂಗಿ, ಶಿವಪುತ್ರಪ್ಪ ಕರೂರ, ಮಲ್ಲಿಕಾರ್ಜುನ ಪಾಟೀಲ್, ಅಧಿಕಾರಿಗಳಾದ ವಿರೇಂದ್ರ ನಾವದಗಿ, ಮಹಾದೇವಿ ಗದ್ದಿ, ಅಂಬರೀಶ ಕಾಂಬಳೆ, ಕೆ.ಎಂ. ಕೋಟೆ, ಶಂಕರ ಪಟವಾರಿ ಸೇರಿದಂತೆ ಇತತರು ಇದ್ದರು.