ಅಂಗನವಾಡಿ ಕಟ್ಟಡ ಬಾಡಿಗೆ ಹೆಚ್ಚಳಕ್ಕೆ ಸ್ವಾಗತ
ಯಾದಗಿರಿ: ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಹೆಚ್ಚಿಸಿ ಈ ತಿಂಗಳಿನಿಂದಲೇ ಜಾರಿಯಾಗುವಂತೆ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಆಲ್ ಇಂಡಿಯಾ ಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ಸ್ವಾಗತಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ಅದಕ್ಕಾಗಿ ಸಚಿವೆ ಉಮಾಶ್ರೀ ಮತ್ತು ನಿರ್ದೇಶಕಿ ಗುರುನೀತ್ ತೇಜ್ರನ್ನು ಸಂಘವು ಅಭಿನಂದಿಸುತ್ತದೆ. ರಾಜ್ಯ ಬಜೆಟ್ಗೆ ಕೆಲವು ದಿನಗಳ ಮುಂಚೆ ಸಂಘದ ರಾಜ್ಯ ಪದಾಧಿಕಾರಿಗಳ ನಿಯೋಗವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರನ್ನು ಭೇಟಿಯಾಗಿ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿತ್ತು. ಕಟ್ಟಡಗಳ ಬಾಡಿಗೆ ಹೆಚ್ಚಿಸುವುದೂ ಸೇರಿದಂತೆ ಹಂತಹಂತವಾಗಿ ನೌಕರರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಅಂದು ನಿಯೋಗಕ್ಕೆ ಭರವಸೆಯನ್ನು ನೀಡಿದ್ದರು.
ಅದರಂತೆ ಆಗಸ್ಟ್ನಿಂದಲೇ ಜಾರಿಯಾಗುವಂತೆ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಬಾಡಿಗೆ ಕಟ್ಟಡಗಳಿಗೆ ಮಾಸಿಕ 750, ಜಿಲ್ಲಾ ಕೇಂದ್ರಗಳಲ್ಲಿನ ಕಟ್ಟಡಗಳಿಗೆ 3000 ಮತ್ತು ಮಹಾ ನಗರ ಪಾಲಿಕೆಗಳ ವ್ಯಾಪ್ತಿಯ ಕಟ್ಟಡಗಳಿಗೆ 5000 ಎಂದು ನಿಗದಿಗೊಳಿಸಿ ಆದೇಶಿಸಲಾಗಿದೆ.
2002 ರಿಂದ ಇಲ್ಲಿಯವರೆಗೆ ಅಂಗನವಾಡಿ ಕಟ್ಟಡಗಳ ಬಾಡಿಗೆಗೆ ಗ್ರಾಮೀಣ ಕಟ್ಟಡಗಳಿಗೆ ಮಾಸಿಕ ಕೇವಲ 200, ಜಿಲ್ಲಾ ಕೇಂದ್ರಗಳ ಕಟ್ಟಡಗಳಿಗೆ 500 ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಕಟ್ಟಡಗಳಿಗೆ 750 ಇತ್ತು. ಈ ಹಣದಲ್ಲಿ ಕಟ್ಟಡಗಳು ಬಾಡಿಗೆಗೆ ಸಿಗುತ್ತಿರಲಿಲ್ಲ. ಅಲ್ಲದೇ, ಕಡಿಮೆ ಹಣವನ್ನೂ ಸರಿಯಾಗಿ ಬಿಡುಗಡೆ ಮಾಡದ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಬಾಡಿಗೆಯ ಹಣವನ್ನು ಅಂಗನವಾಡಿ ನೌಕರರಿಂದಲೇ ಭರಿಸಲು ಹೇಳುತ್ತಿದ್ದರು. ಇದೀಗ ಬಾಡಿಗೆ ಹೆಚ್ಚಿಸಿರುವುದು ನೌಕರರ ಹೋರಾಟಕ್ಕೆ ಸಂದ ಜಯ ಎಂದರು.
ಆದರೆ, ಈ ಬಾಡಿಗೆ ಹಣವನ್ನು ನೌಕರರಿಗೆ ಸರಿಯಾಗಿ ತಲುಪಿ ಸರ್ಕಾರದ ಹಣದಿಂದಲೇ ಕೇಂದ್ರಗಳ ಕಟ್ಟಡದ ಬಾಡಿಗೆಗೆ ಹಣ ನೀಡಲು ಸೂಕ್ತಕ್ರಮ ವಹಿಸಬೇಕೆಂದು ಸಂಘವು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒತ್ತಾಯಿಸಿದೆ. ಪಾರದರ್ಶಕವಾಗಿ ಪಾವತಿಯಾಗುವಂತೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಮತ್ತು ಮೇಲುಸ್ತುವಾರಿ ಮಾಡಬೇಕೆಂದು ಸಂಘವು ಆಗ್ರಹಿಸಿದೆ.
ಅಂಗನವಾಡಿ ನೌಕರರು ಈ ಸೌಲಭ್ಯವನ್ನು ನೀಡುವಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಈ ತಿಂಗಳಿನಿಂದಲೇ ಬಾಡಿಗೆ ಹಣ ನೀಡದಿದ್ದಲ್ಲಿ ತಕ್ಷಣ ಸಂಘದ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ. ಸಂಘದ ರಾಜ್ಯ ಸಮಿತಿಯನ್ನು ಸಂಪರ್ಕಿಸಲು 9448814045, ಜಿಲ್ಲಾ ಸಂಘವನ್ನು 9448150047 ಸಂಪರ್ಕಿಸುವಂತೆ ಡಿ.ಉಮಾದೇವಿ ತಿಳಿಸಿದ್ದಾರೆ.