ಕ್ರೀಡೆ ಶಾರೀರಿಕ ಸಮತೋಲನಕ್ಕೆ ಸಹಕಾರಿ
ಕ.ಪ್ರ.ವಾರ್ತೆ ಸುರಪುರ ಆ.23
ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ. ಶಾರೀರಿಕ ಸಮತೋಲನಕ್ಕೆ ಸಹಕಾರಿ ಆಗುವುದರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ ಹೇಳಿದರು.
ಇಲ್ಲಿನ ಬಾಲಕರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಸುರಪುರ ಮತ್ತು ರಂಗಂಪೇಟ ವಲಯಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಯೋಜನಾ ಉಪನಿರ್ದೇಶಕ ಚಂದ್ರಪ್ಪ ಮಾತನಾಡಿ, ಪಠ್ಯ ವಿಷಯ ಬೋಧನೆ ಮಾಡುವುದಷ್ಟೆ ನಮ್ಮ ಕೆಲಸ ಎಂದು ಭಾವಿಸಬೇಡಿ. ವಿದ್ಯಾರ್ಥಿಗಳ ಆಸಕ್ತಿಯನ್ನು ಗುರುತಿಸುವುದು ಕೂಡಾ ಅಷ್ಟೆ ಪ್ರಮುಖವಾಗಿದೆ. ಅವರ ಆಸಕ್ತಿ ಮೇರೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ನಿಮ್ಮ ಸಲಹೆ ಸೂಚನೆ, ಮಾರ್ಗದರ್ಶನ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮುಖಂಡ ಸುರೇಶ ತಂಬಾಕಿ ಕ್ರೀಡಾಜೋತಿ ಸ್ವೀಕರಿಸಿದರು. ಪುರಸಭೆ ಸದಸ್ಯ ದೇವಿಂದಪ್ಪ ಕಳ್ಳಿಮನಿ ಕ್ರೀಡಾ ದ್ವಜಾರೋಹಣ ನೆರವೇರಿಸಿದರು. ಶಾಲೆಯ ಮುಖ್ಯಗುರು ಸಂಗಮ್ಮ ನಾಗಾವಿ, ಸಮಾಜ ಕಲ್ಯಾಣಾಧಿಕಾರಿ ಬಸವರಾಜ ಇನಾಂದಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಗಣ್ಣ ಪಟ್ಟಣ್ಣ ಶೆಟ್ಟಿ ಸ್ವಾಗತಿಸಿ, ಲಕ್ಷ್ಮಣ ಬಿರಾದಾರ ನಿರೂಪಿಸಿ. ಸತ್ಯನಾರಾಯಣ ದರಬಾರಿ ವಂದಿಸಿದರು.