ರಾಯರ ಲಕ್ಷ ಅಷ್ಟೋತ್ತರ ನಾಮ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ನಿಮಿತ್ತ ಭಕ್ತರಿಂದ ಒಂದು ಲಕ್ಷ ಓಂ ಶ್ರೀರಾಘವೇಂದ್ರಾಯ ನಮಃ ಅಷ್ಟಾಕ್ಷರ ಮಂತ್ರಗಳ ಸ್ಮರಣೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಸುಪ್ರಭಾತ, ಅಭಿಷೇಕ, ವಿಷ್ಣು ಸಹಸ್ರನಾಮ, ಮನ್ಯು ಸೂಕ್ತ, ವಾಯುಸ್ತುತಿ ಪುನಶ್ಚರಣ, ತಾರತಮ್ಯ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಂಜೆ ಭಜನೆ, ಗಜವಾಹನ, ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವ ನಡೆದು, ವಿಶೇಷ ಸೇವೆ ಸಲ್ಲಿಸಿದ ಭಕ್ತರಿಗೆ ಶೇಷವಸ್ತ್ರ ನೀಡಿ ಗೌರವಿಸಲಾಯಿತು. ಅರ್ಚಕರಾದ ವಾಸುದೇವಾಚಾರ್ಯ ಜೋಶಿ, ಗೋಪಾಲಾಚಾರ್ಯ, ಋತ್ವಿಜರಾದ ನರಸಿಂಹಾಚಾರ್ಯ, ಕೇಶವಾಚಾರ್ಯ, ಹಣಮಂತಾಚಾರ್ಯ ಸರಡಗಿ, ಎನ್.ಆರ್. ಜೋಶಿ, ವಸಂತಾಚಾರ್ಯ, ಟ್ರಸ್ಟ್‌ನ ಅಧ್ಯಕ್ಷ ಮುರುಳೀಧರಾವ ಶಹಾಬಾದಿಕರ್, ಎಸ್.ಕೆ. ಜಾಹಾಗಿರದಾರ್, ಬಿ.ವಿ.ಕುಲಕರ್ಣಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಪಾದಯಾತ್ರೆ
ಗುಲ್ಬರ್ಗ: ಜೇವರ್ಗಿ ತಾಲೂಕಿನ ಸುಕ್ಷೇತ್ರ ಕಡಕೋಳ ಮಡಿವಾಳೇಶ್ವರ ಮಠದಿಂದ ಆ.24ರಂದು ಬೆಳಿಗ್ಗೆ 10ಕ್ಕೆ ಅನೇಕ ಗ್ರಾಮಗಳಿಂದ ಸಹಸ್ರ ಸಂಖ್ಯೆ ಭಕ್ತರೊಂದಿಗೆ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳಿಂದ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ. ಸಕಲ ವಾದ್ಯವೈಭವ, ಭಜನೆಗಳೊಂದಿಗೆ ಅರಳಗುಂಡಗಿ ಮಾರ್ಗವಾಗಿ ಚಿನ್ಮಯಗಿರಿಯ ಮಹಾಂತೇಶ್ವರ ಕಡಕೋಳ ಮಡಿವಾಳೇಶ್ವರ ಗುರುಗಳ ಮಠಕ್ಕೆ ತಲುಪಲಿದೆ. ಆ.27 ರ ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಹಾಮಂಗಲ ನಡೆಯಲಿದೆ ಎಂದು ತುಕಾರಾಮ ತಿಳಿಸಿದ್ದಾರೆ.