ಇಂದಿನ ಕಾರ್ಯಕ್ರಮಗಳು
ಇಂದು ಶ್ರೀನಿವಾಸ ವೈಭವೋತ್ಸವ
ಗುಲ್ಬರ್ಗ: ಟಿಟಿಡಿ ದಾಸ ಸಾಹಿತ್ಯ ಹಾಗೂ ಸತ್ಮಾತ್ಮ ಸೇನೆ ವಿವಿದೋದ್ದೇಶ ಸೇವಾ ಸಂಸ್ಥೆ ವತಿಯಿಂದ ನಗರದಲ್ಲಿ ಊ. 25 ರಂದು ಶ್ರೀನಿವಾಸ ದೇವರ ವೈಭವೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 6 ಗಂಟೆಯಿಂದ 8ರವರೆಗೆ ಬ್ರಹ್ಮಪುರ ರಾಯರ ಮಠದಲ್ಲಿ ಸುಪ್ರಭಾತ, ತಿರುವೆಂಜನ ಅಭಿಷೇಕ, ಪಂಚಾಮೃತ ಹಾಗೂ ಸಾಮೂಹಿಕ ಭಜನೆ ನಡೆಯುವುದು. ಮಧ್ಯಾಹ್ನ 3 ಗಂಟೆಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ನೂತನ ವಿದ್ಯಾಲಯ ಮೈದಾನದವರೆಗೆ ಶ್ರೀನಿವಾಸ ದೇವರ ಭವ್ಯ ಶೋಭಾಯಾತ್ರೆ ನಡೆಯುವುದು. ಸಂಜೆ 5. 30ಕ್ಕೆ ನೂತನ ವಿದ್ಯಾಲಯದ ಮೈದಾನದಲ್ಲಿ ವೈಭವೋತ್ಸವ ಕಾರ್ಯಕ್ರಮ ನಡೆಯಲಿದೆ.
ಶ್ರಾವಣ ಸಾಹಿತ್ಯ ಸಂಜೆ
ಚಿತ್ತಾಪುರ: ತಾಲೂಕಿನ ಮಾಲಗತ್ತಿ ಗ್ರಾಮಪಂಚಾಯತಿ ಆವರಣದಲ್ಲಿ ಆ.25 ರಂದು ಸಂಜೆ 5ಕ್ಕೆ ರಾವೂರ ವಲಯ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರಾವಣ ಸಾಹಿತ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ. ಎಂದು ಕಸಾಪ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಹಾಗೂ ಹಣಮಂತ ಬಾಳಕ, ದೇವರಾಜ ವಕೀಲ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಶರಣಪ್ಪ ಸಣಮೋ ಉದ್ಘಾಟಿಸುವರು. ಗ್ರಾಪಂ ಸದಸ್ಯ ಕಾಶಿನಾಥ ಸಣಮೋ, ಶಿವಪುತ್ರಪ್ಪ ಹೂಗಾರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ವಲಯ ಕಸಾಪ ಅಧ್ಯಕ್ಷ ಡಾ. ಮಲ್ಲಿನಾಥ ತಳವಾರ ವಹಿಸುವರು. ಶರಣು ಜ್ಯೋತಿ ಅವರು ವಚನ ಸಾಹಿತ್ಯಕ್ಕೆ ಶಿವಶರಣಿಯರ ಕೊಡುಗೆ ಕುರಿತು ಉಪನ್ಯಾಸ ನೀಡುವರು.
ಶ್ರಾವಣ ಸಂಜೆ
ಗುಲ್ಬರ್ಗ/ಶಹಾಬಾದ್: ಕನ್ನಡ ಸಾಹಿತ್ಯ ಪರಿಷತ್ತು ರಾವೂರ ವಲಯದ ವತಿಯಿಂದ ಶ್ರಾವಣ ಸಂಜೆ 3ನೇ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯಕ್ಕೆ ಶಿವಶರಣೆಯರ ಕೊಡುಗೆ ಕುರಿತು ಮಾಲಗತ್ತಿ ಗ್ರಾಮ ಪಂಚಾಯತಿ ಪ್ರಾರಾಂಗಣದಲ್ಲಿ ನಡೆಯಲಿದೆ ಎಂದು ಹಣಮಂತ, ದೇವರಾಜ ವಕೀಲ, ಸಿದ್ದು ಬಾಳಿ ತಿಳಿಸಿದ್ದಾರೆ. ಗ್ರಾಪಂ ಮಾಜಿ ಅಧ್ಯಕ್ಷ ಶರಣಪ್ಪ ಸಣಮೋ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಗ್ರಾಪಂ ಸದಸ್ಯ ಕಾಶಿನಾಥ ಸಣಮೋ, ಶಿವಪುತ್ರ ಹೂಗಾರ, ಡಾ. ಮಲ್ಲಿನಾಥ ತಳವಾರ ಉಪಸ್ಥಿತರಿರುವರು, ಶರಣು ಜ್ಯೋತಿ ಉಪನ್ಯಾಸ ನೀಡುವರು.
ಇಂದು ಸಭೆ
ಗುಲ್ಬರ್ಗ: ಕರ್ನಾಟಕ ನಾಟಕ ಶಿಕ್ಷಕರ ಪದವೀಧರರ ಸಂಘದ ಜಿಲ್ಲಾ ಘಟಕದ ಪ್ರಥಮ ಸಭೆಯು ಆ.25 ರಂದು ಬೆಳಿಗ್ಗೆ 10ಕ್ಕೆ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಕರೆಯಲಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ನಾಟಕ ಪದವೀಧರರು, ನೀನಾಸಂ ಪದವೀಧರರು, ಸಾಣೇಹಳ್ಳಿ ಮತ್ತು ಕುಂದಾಪುರದ, ಹಂಪಿ ವಿವಿ ನಾಟಕ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಭಾಗವಹಿಸಬೇಕೆಂದು ಮಹಾಂತೇಶ ಮಾಡ್ಯಾಳ ಪ್ರಕಟಣೆ ಮೂಲಕ ಕೋರಿದ್ದಾರೆ.
ಮಗು ಪೋಷಕರ ಪತ್ತೆಗೆ ಮನವಿ
ಗುಲ್ಬರ್ಗ: ನಗರದ ಪಂಚಶೀಲ ಬಡಾವಣೆಯ ಹನುಮಾನ ದೇವಾಲಯದ ಹತ್ತಿರ ಅಂದಾಜು 3 ವರ್ಷದ ಹೆಣ್ಣು ಮಗುವನ್ನು ಬಿಟ್ಟು ಹೋಗಿರುತ್ತಾರೆ. ಈ ಮಗುವು ಗೋಧಿ ಬಣ್ಣ ಹೊಂದಿದ್ದು, ಉತ್ತಮ ಆರೋಗ್ಯವಂತವಾಗಿದೆ. ಈ ಮಗುವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ಕಳೆದ ಜೂ.17ರಂದು ದಾಖಲಿಸಲಾಗಿದೆ. ಈ ಮಗುವಿನ ಪಾಲಕರು, ಪೋಷಕರು ಯಾರಾದರೂ ಇದ್ದಲ್ಲಿ ಈ ಶಿಶು ಗೃಹದಿಂದ ಸೂಕ್ತ ದಾಖಲಾತಿಗಳನ್ನು ಪ್ರಸ್ತುತಪಡಿಸಿ ಪಡೆದುಕೊಂಡು ಹೋಗುವಂತೆ ಅಮೂಲ್ಯ ಶಿಶುಗೃಹದ ಅಧೀಕ್ಷಕರು ಕೋರಿದ್ದಾರೆ.
ಹೈಕೋರ್ಟ್
ನ್ಯಾ.ಪಾಟೀಲ್ ಪ್ರವಾಸ
ಗುಲ್ಬರ್ಗ: ಬೆಂಗಳೂರಿನ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಬಿಜಾಪುರ ಮಾರ್ಗವಾಗಿ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಿದ್ದು, ಆ.25 ರಂದು ಗುಲ್ಬರ್ಗ ಹೈಕೋರ್ಟ್ ಖಾಯಂ ಪೀಠದ ಉದ್ಘಾಟನಾ ಕಾರ್ಯಕ್ರಮ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಿದ್ಧತಾ ಸಭೆಯನ್ನು ನಡೆಸುವರು. ಮಧ್ಯಾಹ್ನ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.
ಇಂದು ದಂಡಗುಂಡ ಬಸವೇಶ್ವರ ಜಾತ್ರೆ
ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ದಂಡಗುಂಡ ಬಸವೇಶ್ವರ ಜಾತ್ರಾ ಮಹೋತ್ಸವ ಆ.26ರಂದು ಶ್ರಾವಣ 3ನೇ ಸೋಮವಾರ ಸಂಗನಬಸವ ಶಿವಾಚಾರ್ಯ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಜರುಗಲಿದೆ. 25ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಗಂಗಾಸ್ಥಳ. 26ರಂದು ಸೋಮವಾರ ಬೆಳಗ್ಗೆ 9ಕ್ಕೆ ಪಲ್ಲಕಿ ಮೆರವಣಿಗೆ ಸಂಜೆ 6ಕ್ಕೆ ರಥೋತ್ಸವ ಜರುಗುವುದು. 27ರಂದು ಕೈ ಕುಸ್ತಿ ನಡೆಯಲಿದೆ. ಜಾತ್ರೆಗೆ ಬರಲು ಯಾದಗಿರಿ, ಚಿತ್ತಾಪುರ, ಗುಲ್ಬರ್ಗ, ಗುರುಮಿಠಕಲ್ದಿಂದ ಬಸ್ಸಿನ ಸೌಕರ್ಯವಿದೆ ಎಂದು ಟ್ರಸ್ಟ್ ಕಮೀಟಿ ತಿಳಿಸಿದೆ.
ಪಾಲಕರ ಪತ್ತೆಗೆ ಶೋಧನೆ
ಗುಲ್ಬರ್ಗ: ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ 14 ವರ್ಷದ ಕುಮಾರಿ ಜಯಶ್ರೀ ತಂದೆ ಶಿವಣ್ಣರನ್ನು 13.9.2011ರಂದು ದಾಖಲಿಸಿಕೊಳ್ಳಲಾಗಿದೆ. ಪಾಲಕ, ಪೋಷಕರ ಪತ್ತೆಗಾಗಿ ಶೋಧನೆ ನಡೆದಿದೆ. ಜಯಶ್ರೀ ಅವಳ ಪಾಲಕರು ಅಥವಾ ಪೋಷಕರು ಯಾರಾದರೂ ಇದ್ದಲ್ಲಿ ಗುಲ್ಬರ್ಗ ಸರ್ಕಾರಿ ಬಾಲಕಿಯರ ಬಾಲಮಂದಿರ ಸಂಪರ್ಕಿಸಲು ಕೋರಲಾಗಿದೆ.
ಅಕ್ರಮ ಮದ್ಯ: ಕ್ರಮಕ್ಕೆ ಆಗ್ರಹ
ಗುಲ್ಬರ್ಗ: ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, 15 ದಿನದೊಳಗಾಗಿ ಈ ದಂಧೆಗೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಭ್ರಷ್ಟಾಚಾರ ನಿರ್ಮೂಲನ ದಳದ ಅಧ್ಯಕ್ಷ ಯಶವಂತ ಹತ್ತಿರಕಿ ಎಚ್ಚರಿಸಿದ್ದಾರೆ.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಬಕಾರಿ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯದ ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಇಂದು ಉಚಿತ ತರಬೇತಿ ಕಾರ್ಯಾಗಾರ
ಗುಲ್ಬರ್ಗ: ನಗರದ ಯೂನಿವರ್ಸಲ್ ತರಬೇತಿ ಸಂಸ್ಥೆಯು ಬ್ಯಾಂಕ್ಗಳ ಹುದ್ದೆಗಳ ನೇಮಕಾತಿಗಾಗಿ ಉಚಿತ ತರಬೇತಿ ಶಿಬಿರ ಆ.25 ರಂದು ನೀಡಲಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಖಾಲಿ ಇರುವ ಸಾವಿರಾರು ಕ್ಲರಿಕಲ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಈ ಪ್ರಯುಕ್ತ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10ಕ್ಕೆ ಹೈದ್ರಾಬಾದಿನ ಕೈಟ್ಸ್ ಬ್ಯಾಂಕ್ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕ ಪ್ರೊ. ಲೆನಿನ್ ಖಾನ್ ಹಾಗೂ ಬೆಂಗಳೂರಿನ ಮಾರ್ಗದರ್ಶಿ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯ ಉಪನ್ಯಾಸಕ ಗುರು ಅವರು ಪರೀಕ್ಷೆಗಳ ಸಮಗ್ರ ಪಠ್ಯಕ್ರಮ ಹಾಗೂ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡಿ ಯಾವ ರೀತಿ ಯಶಸ್ವಿಯಾಗಬೇಕೆಂಬುವುದರ ಕುರಿತು ತರಬೇತಿ ನೀಡಲಿದ್ದಾರೆ.
ಆಸಕ್ತ ಸ್ಪರ್ಧಾರ್ಥಿಗಳು ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಯುನಿವರ್ಸಲ್ ತರಬೇತಿ ಸಂಸ್ಥೆ, ಸೂಪರ್ ಮಾರ್ಕೆಟ್ ಮುಖ್ಯರಸ್ತೆ, ವಾದಿರಾಜ ಭವನ ಹಿಂದುಗಡೆ, ರೇಣುಕಾಚಾರ್ಯ ಕಲ್ಯಾಣ ಮಂಟಪದ ನೆಲ ಮಹಡಿ, ಗುಲ್ಬರ್ಗ (9916599569, 9964205097) ಸಂಪರ್ಕಿಸಲು ನಿರ್ದೇಶಕ ಸಂತೋಷ ಮೆಟಗಾರ ಕೋರಿದ್ದಾರೆ.
ಇಂದು, ನಾಳೆ ರಾಷ್ಟ್ರೀಯ ವಿಚಾರ ಸಂಕಿರಣ
ಗುಲ್ಬರ್ಗ: ಕರ್ನಾಟಕ ಜನಪದ ಪರಿಷತ್ತು ಹಾಗೂ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆ.25 ಮತ್ತು 26ರಂದು ಜೇವರ್ಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಭಾಷಾ ಸಾಮರಸ್ಯ ಹಾಗೂ ತತ್ವಪದ ಗಾಯನದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಆ.25 ರಂದು ಬೆಳಿಗ್ಗೆ 10ಕ್ಕೆ ಈ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಉದ್ಘಾಟಿಸುವರು. ಗಂವಾರ ತ್ರಿವಿಕ್ರಮಾನಂದ ಸರಸ್ವತಿ ಮಠದ ಸೋಪಾನನಾಥ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ವಹಿಸುವರು.
ಶಾಸಕ ಡಾ. ಅಜಯಸಿಂಗ್ ನೇತೃತ್ವ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
'ಸಿಟಿ ಲೈಟ್ಸ್'ಚಿತ್ರ ಪ್ರದರ್ಶನ ಇಂದು
ಗುಲ್ಬರ್ಗ: ಆವಿಷ್ಕಾರ ಫಿಲ್ಮ್ ಸೊಸೈಟಿ ವತಿಯಿಂದ ಆ.25 ರಂದು ನಗರದ ವಿಶ್ವೇಶ್ವರ ಭವನದಲ್ಲಿ ಸಂಜೆ 5ಕ್ಕೆ ಚಾರ್ಲಿ ಚಾಪ್ಲಿನ್ ಅವರ ವಿಶ್ವದ ಶ್ರೇಷ್ಠ ಚಲನಚಿತ್ರಗಳಲ್ಲಿ ಒಂದಾಗಿರುವ ಸಿಟಿ ಲೈಟ್ಸ್ ಚಲನಚಿತ್ರ ಪ್ರದರ್ಶಿಸಲಾಗುತ್ತಿದೆ.
ನಿವೃತ್ತ ಪ್ರಾಚಾರ್ಯ ಕೆ.ವಿಶ್ವನಾಥ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಗುಲ್ಬರ್ಗ ನಾಗರಿಕ ಹೋರಾಟ ಸಮಿತಿ ಸಂಚಾಲಕಿ ವಿ. ನಾಗಮ್ಮಾಳ ಚಿತ್ರದ ಕುರಿತು ಸಂವಾದ ನಡೆಸಿಕೊಡಲಿದ್ದಾರೆ. ಆವಿಷ್ಕಾರ ಸಮಿತಿ ಸದಸ್ಯೆ ಅಶ್ವಿನಿ ಅಧ್ಯಕ್ಷತೆ ವಹಿಸುವರು.
ಹೆಚ್ಚಿನ ಸಂಖ್ಯೆಯಲ್ಲಿ ಸೊಸೈಟಿಯ ಎಲ್ಲ ಸದಸ್ಯರು, ಸಾರ್ವಜನಿಕರು ಭಾಗವಹಿಸಲು ಸಂಚಾಲಕ ವಿ.ಜಿ. ದೇಸಾಯಿ ಕೋರಿದ್ದಾರೆ.
29ರಂದು ಸಚಿವರ ನಿವಾಸದೆದುರು ಧರಣಿ
ಗುಲ್ಬರ್ಗ:: ಉತ್ತರ, ದಕ್ಷಿಣ, ಗ್ರಾಮೀಣ ಮತಕ್ಷೇತ್ರದ ಆಶ್ರಯ ಫಲಾನುಭವಿಗಳಿಗೆ ಜಮೀನು ಖರೀದಿ ಮಾಡಿ ಆಶ್ರಯ ಮನೆಗಳನ್ನು ಕಲ್ಪಿಸುವುದಾಗಿ ಸುಳ್ಳು ಆಶ್ವಾಸನೆ ನೀಡಿದ ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರ ಗುಲ್ಬರ್ಗದ ನಿವಾಸದ ಎದುರು ಆ.29ರಿಂದ ಅನಿರ್ಧಿಷ್ಟ ಧರಣಿ ನಡೆಸಲು ನಾಗರಿಕರು ನಿರ್ಧರಿಸಿದ್ದಾರೆ.
ಕರ್ನಾಟಕ ದಲಿತ ಸರ್ವೋದಯ ಸಮಿತಿಯ ನೇತೃತ್ವದಲ್ಲಿ ಈ ಧರಣಿ ಹಮ್ಮಿಕೊಳ್ಳಲಾಗಿದ್ದು, ನ್ಯಾಯ ಸಿಗುವವರೆಗೆ ಧರಣಿ ನಡೆಸಲಾಗುವುದು.ಫಲಾನುಭವಿಗಳು ಭಾಗವಹಿಸಬೇಕೆಂದು ವಿ.ಎಚ್. ವಾಲಿಕರ್ ಕೋರಿದ್ದಾರೆ.
ಉಚಿತ ಪ್ರವೇಶ: ಅರ್ಜಿ ಆಹ್ವಾನ
ಗುಲ್ಬರ್ಗ: ನಗರದ ಪರ್ಯಾಯ ಸಮಾಜಕಾರ್ಯ (ಎಂಎಸ್ಡಬ್ಲೂ) ಮಹಾವಿದ್ಯಾಲಯವು ಸಮಾಜಕಾರ್ಯ ಸ್ನಾತಕೋತ್ತರ ಪದವಿ ಕೋರ್ಸಿಗೆ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶ ನೀಡಲು ನಿರ್ಧರಿಸಿದ್ದು, ಆ.28 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಯಾವುದೇ ಪದವಿಯನ್ನು ತೇರ್ಗಡೆಯಾದ ಪದವೀಧರರು ಈ ವೃತ್ತಿಪರ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಬಿಎಸ್ಡಬ್ಲೂ ಪದವಿ ಪಡೆದವರಿಗೆ ವಿಶೇಷ ಶಿಷ್ಯವೇತನದ ಅವಕಾಶಗಳಿವೆ.
ಪದವಿಯಲ್ಲಿ ಕನಿಷ್ಠ 45 ಅಂಕಗಳು ಪಡೆದಿರಬೇಕು. ಇತರೆ ಹಿಂದುಳಿದ ವಿದ್ಯಾರ್ಥಿಗಳಿಗೂ ಕೂಡ ರಿಯಾಯತಿ ಶುಲ್ಕದೊಂದಿಗೆ ಪ್ರವೇಶ ಅವಕಾಶವಿದ್ದು, ಕೇವಲ 25 ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶವಿರುವುದರಿಂದ ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗೆ ಪರ್ಯಾಯ ಸಮಾಜಕಾರ್ಯ ಮಹಾವಿದ್ಯಾಲಯ, ಸರ್ವೆ ನಂ.74, ಪ್ಲಾಟ್ ನಂ.10, ಗಣೇಶ ನಗರ, ಗಣೇಶ ನರ್ಸಿಂಗ್ ಹೋಂ ಹಿಂಭಾಗ, ಹಳೇ ಜೇವರ್ಗಿ ರಸ್ತೆ, ಗುಲ್ಬರ್ಗ- 585102 ಅಥವಾ ಮಹೇಶಕುಮಾರ್ ರಾಠೋಡ ಪ್ರಾಚಾರ್ಯರು, 09472- 272474, 9448576621ಗೆ ಸಂಪರ್ಕಿಸಬಹುದು.