ಎಸಿಸಿ ಕಂಪನಿ ನಿರ್ದೇಶಕರ ನೀತಿ ಖಂಡಿಸಿ ಲಾರಿ ಮಾಲಿಕರ ಸಂಘದಿಂದ ರೈಲು ತಡೆ
ಗುಲ್ಬರ್ಗ: ಲಾರಿ, ಬಲ್ಕರ್ ಟ್ರಾನ್ಸ್‌ಪೋರ್ಟ್ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಮಾರಕವಾದ ಎಸಿಸಿ ಕಂಪನಿ ನಿರ್ದೇಶಕರ ನೀತಿ ವಿರೋಧಿಸಿ ಲಾರಿ ಹಾಗೂ ಬಲ್ಕರ್ ಮಾಲೀಕರ ಸಂಘ ಇತ್ತೀಚೆಗೆ ವಾಡಿ ಎಸಿಸಿ ರೇಲ್ವೆ ಗೇಟ್ ಹತ್ತಿರ ರೈಲು ತಡೆ ಚಳವಳಿ ನಡೆಸಿತು.
ಶಕ್ತಿನಗರದಿಂದ ವಾಡಿಗೆ ಬರುವ ರೇಲ್ವೆ ಮೂಲಕ ಸಾಗಣೆ ಮಾಡುವ ಬೂದಿ ಸಾಗಣೆ ರದ್ದುಗೊಳಿಸಬೇಕು. ಪ್ರತಿ ತಿಂಗಳು ಕನಿಷ್ಠ ಬೂದಿ ಸಾಗಣೆ 30 ಟ್ರಿಪ್ ಶಕ್ತಿನಗರದಿಂದ ವಾಡಿ ಪ್ಲಾಂಟ್‌ಗೆ ಕೆಲಸ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ಥಳೀಯ ಟೈರ್ ಅಂಗಡಿಗಳು ಮತ್ತು ಸಂಬಂಧಪಟ್ಟ ಮೆಕ್ಯಾನಿಕ್‌ಗಳಿಗೆ ಕೆಲಸ ಮಾಡಲು ಸ್ಥಳಾವಕಾಶ ಮಾಡಿಕೊಡಬೇಕು ಮತ್ತು ಸ್ಥಳೀಯ ಟ್ರಾನ್ಸ್‌ಪೋರ್ಟ್ ಲಾರಿ ಹಾಗೂ ಬಲ್ಕರ್ ಅವರಿಗೆ ಲೊಡಿಂಗ್ ಅಥವಾ ಅನಲೋಡಿಂಗ್ ಮಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕಂಪನಿ ಗುತ್ತಿಗೆದಾರರಿಗೆ, ಕಂಪನಿ ಅಧಿಕಾರಿಗಳಿಗೆ, ಸ್ಥಳೀಯ ಕಾರ್ಮಿಕರಿಗೆ ನಿರ್ದೇಶಕರು ನೀಡುತ್ತಿರುವ ಕಿರುಕುಳ ತಪ್ಪಿಸಬೇಕು. ಸ್ಥಳೀಯ ವಿದ್ಯಾವಂತರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಎರಡು ಗಂಟೆ ಕಾಲ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಮು ರಾಠೋಡ, ಸಾಲೋಮನ ಆರ್, ಗಣೇಶ ಚವ್ಹಾಣ, ಸದಾಶಿವ ಸೇಟ್, ಮೋಹನ ಕಾರಬಾರಿ, ಬಾಳು ನಾರಾಯಣ ಚವ್ಹಾಣ, ಇರ್ಫಾನ್, ತುಕಾರಾಮ, ರಾಜು ಹರನಾಟ, ಭಾಗವತ ಸುಳ್ಳೆ, ಸೋಮಲಾ ಚವ್ಹಾಣ ಭಾಗವಹಿಸಿದ್ದರು.