ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಾಗತೀಕರಣದಿಂದ ಮಾನವೀಯ ಮೌಲ್ಯಗಳಿಗೆ ಪೆಟ್ಟು

Mainashree
Updated On : 25 Aug 2013, 11:14 am

ಕ.ಪ್ರ.ವಾರ್ತೆ  ಯಾದಗಿರಿ        ಆ.24
(ಗುರುಬಸಯ್ಯ ಅಮ್ಮಾಪುರ ವೇದಿಕೆ)
ಜಾಗತೀಕರಣದಿಂದ ನಮ್ಮ ಗ್ರಾಮೀಣ ಸೊಗಡು, ಮಾನವೀಯ ಮೌಲ್ಯಗಳು, ಸಂಬಂಧಗಳಿಗೆ ಪೆಟ್ಟು ಬಿದ್ದಿದೆ. ಆದ್ದರಿಂದ ನಾವೆಲ್ಲ ಎತ್ತ ಸಾಗುತ್ತಿದ್ದೇವೆ? ಇದಕ್ಕೆಲ್ಲ ಪರಿಹಾರವೇನು? ಎತ್ತ ಸಾಗಬೇಕಿದೆ ಎಂದು ನಮ್ಮನ್ನೇ ಪ್ರಶ್ನಿಸಿಕೊಂಡು ಹೊಸತನ್ನು ಯೋಚಿಸುವ ಕಾಲಘಟ್ಟ ಇದಾಗಿದೆ ಎಂದು ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿದ್ದರಾಮ ಹೊನಕಲ್ ಅಭಿಪ್ರಾಯಪಟ್ಟರು.
ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಚುಟುಕು ಸಾಹಿತ್ಯ ಪರಿಷತ್ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ನುಡಿ ಆಡಿದರು.
ಕಟ್ಟುಪಾಡು: ಇಂದು ಯಾರಿಗೂ ಸಮಯವಿಲ್ಲದ ಗಡಿಬಿಡಿಯ ಬದುಕು ಸಾಗಿಸುವಂತಾಗಿದೆ. ಇದರಿಂದ ಮಾನವೀಯ ಸಂಬಂಧಗಳು, ನೈತಿಕ ಪ್ರಶ್ನೆಗಳು, ಸಾಮಾಜಿಕ ಕಟ್ಟುಪಾಡುಗಳು, ಪಾಪಪ್ರಜ್ಞೆಗಳು ಮನುಷ್ಯನಿಂದ ದೂರವಾಗಿ ಅಲ್ಲಿ ಭೂತದ ಕುಣಿತ ಆರಂಭವಾಗಿದೆ. ಮನೆಮನೆಗೆ ಟಿವಿ, ಮೌಢ್ಯ, ಕಂದಾಚಾರ, ಪರಸ್ಪರ ಅಪನಂಬಿಕೆ, ರೋಚಕತೆ, ಬ್ರೇಕಿಂಗ್ ನ್ಯೂಸ್ ಹಾವಳಿಯಿಂದ, ಅದರ ದಾಸರಾಗುವಂತೆ ಮಾಡಿದೆ. ಆದ್ದರಿಂದ ಸಾಹಿತಿಗಳು, ಲೇಖಕರು, ಮಾಧ್ಯಮದವರು ಸಮಾಜದ ಓರೆಕೋರೆಗಳನ್ನು ತಿದ್ದಿ ಸರಿದಾರಿಯಲ್ಲಿ ಹೋಗುವಂತೆ ಮಾಡಲು ಚಿಂತಿಸಬೇಕು ಎಂದು ಕರೆ ನೀಡಿದರು.
ಜವಾಬ್ದಾರಿ: ಪ್ರತಿಯೊಬ್ಬ ಬರಹಗಾರ ಸಮಾಜದ ಸಾಕ್ಷಿಯಾಗಿ ಕೆಲಸ ಮಾಡುತ್ತಾನೆ. ವಚನಕಾರರಿಂದ ಹಿಡಿದು ಇಂದಿನ ಚುಟುಕು ಕವಿಗಳವರೆಗೆ ಎಲ್ಲರಿಗೂ ಅವರದೇ ಆದ ಸಾಮಾಜಿಕ ಜವಾಬ್ದಾರಿಯಿದೆ. ಬರಹ ತ್ಯಾಗವನ್ನು ನಿರೀಕ್ಷಿಸುತ್ತದೆ. ಪ್ರೀತಿ, ಮಮತೆ, ಕಷ್ಟ ಸಹಿಷ್ಣುತೆ, ಔದಾರ್ಯ ಇದ್ದ ಸಂವೇದನಾಶೀಲ ಮನುಷ್ಯ ಕವಿಯಾಗಬಲ್ಲ. ಜನರ ನೋವಿಗೆ ಮಿಡಿಯುವ ಸಾಹಿತ್ಯ ಹುಟ್ಟಬಲ್ಲದು. ಜಗದ ನೋವು, ದುಃಖ ದುಮ್ಮಾನ, ಹಸಿವು, ಬಡತನ, ಅಸಹಾಯಕತೆ, ಅವಮಾನ ಇಂತಹ ನೋವುಗಳ ಪರವಾಗಿ ಕಾವ್ಯ ಹೊರಹೊಮ್ಮಬೇಕು. ಆದ್ದರಿಂದ ಲೇಖಕನ ಹೃದಯ ಸಮಾಜಮುಖಿಯಾಗಿ, ಅದರ ಕಡೆ ಮಿಡಿಯುವ ಮಾಧ್ಯಮವಾದಾಗ ಮಾತ್ರ ಬಹುಕಾಲ ನಿಲ್ಲುವ ಸಾಹಿತ್ಯ ಹುಟ್ಟುತ್ತದೆ ಎಂದು ಹೊನಕಲ್ ಹೇಳಿದರು. ಇದು ಎಲ್ಲರಿಗೂ ಸಮಯದ ಅಭಾವದ ಕಾಲ. ಆದ್ದರಿಂದ ಖಂಡ ಕಾವ್ಯ, ದೀರ್ಘ ಕವಿತೆ ಓದುವ ಸಮಯ ಯಾರಿಗೂ ಇಲ್ಲ. ಈಗೇನಿದ್ದರೂ ಚುಟುಕು ಕಾವ್ಯದ ಕಾಲ. ಸ್ವಲ್ಪದರಲ್ಲೇ ಬಹಳ ಹೇಳಬಹುದು. ಬಹುದೊಡ್‌ಡ ಕತೆಯನ್ನು ನಾಲ್ಕಾರು ಸಾಲುಗಳಲ್ಲಿ ಕಟ್ಟಿಕೊಡುವ ಮೂಲಕ ಚುಟುಕು ಸಾಹಿತ್ಯ ಜನಪ್ರಿಯವಾಗಿದೆ. ಈ ಪ್ರಕಾರದಲ್ಲಿ ಅನೇಕರು ಕೃಷಿ ಮಾಡಿದ್ದಾರೆ ಎಂದು ಸ್ಮರಿಸಿದರು.
ಬೇಡಿಕೆಗಳು: ನೂತನ ಜಿಲ್ಲೆಯಲ್ಲಿ ಮೂಲಭೂತ ಅವಶ್ಯಕತೆಗಳು ಇನ್ನೂ ಆಗಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ವ್ಯವಸ್ಥೆಯಾಗಬೇಕು. ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಲು ರಂಗಮಂದಿರ ನಿರ್ಮಾಣವಾಗಬೇಕು. ಜಿಲ್ಲೆಯಾಗಿ 3 ವರ್ಷ ಕಳೆದರೂ ಇನ್ನೂ ಸುಸಜ್ಜಿತ ಗ್ರಂಥಾಲಯವಿಲ್ಲ. ಗಡಿ ಭಾಗದ ಯಾದಗಿರಿಯಲ್ಲಿ ಕನ್ನಡದ ವಾತಾವರಣ ಕಡಿಮೆಯಿದೆ.
 ಆದ್ದರಿಂದ ನಾಡು ನುಡಿ ಉಳಿವಿಗಾಗಿ ಹೆಚ್ಚೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಗಾಗಿ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಬೇಕು. ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಗುರ್ತಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಜತೆಗೂಡಿ ಶ್ರಮಿಸಬೇಕು ಎಂದು ಹೇಳಿದರು. ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement