ವ್ಯವಸ್ಥೆ ಸುಧಾರಣೆಗೆ ಚುಟುಕು ಸಾಹಿತ್ಯ ಔಷಧಿ
ಯಾದಗಿರಿ: ಚುಟುಕು ಸಾಹಿತ್ಯ ಪ್ರಕಾರವು ಗಾತ್ರದಲ್ಲಿ ಚಿಕ್ಕದಾದರೂ ಅದರ ಖಾರ ಮಾತ್ರ ಜಾಸ್ತಿ. ಹೇಳಬೇಕಾದ ಸಂದೇಶವನ್ನು ನೇರವಾಗಿ ಮುಟ್ಟಿಸಿ ಸಮಾಜದ ಓರೆಕೋರೆಗಳನ್ನು ತಿದ್ದಲು ಇದು ಉತ್ತಮ ಮಾಧ್ಯಮವಾಗಿದೆ. ಇಂದಿನ ಹದಗೆಟ್ಟ ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ ಚುಟುಕು ಸಾಹಿತ್ಯವು ಔಷಧಿ ಇದ್ದಂತೆ ಎಂದು ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ತೋಟೇಂದ್ರ ಶಿವಾಚಾರ್ಯರು ಹೇಳಿದರು.
ಟಿವಿ ಹಾವಳಿ: ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುಟುಕು ಸಾಹಿತ್ಯಕ್ಕೆ ಹಿಂದಿಗಿಂತ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ. ದೂರದರ್ಶನದ ಹಾವಳಿಯಿಂದಾಗಿ ಇಂದು ಯಾರಿಗೂ ಓದಲು ಸಮಯ ಇಲ್ಲದಂತಾಗಿದೆ. ನೂತನ ಜಿಲ್ಲೆಯ ಪ್ರಥಮ ಸಮ್ಮೇಳನ ಹಮ್ಮಿಕೊಂಡು ಕನ್ನಡದ ಕಂಪು ಹೆಚ್ಚಿಸಲು ಚುಸಾಪ ಪದಾಧಿಕಾರಿಗಳು ಶ್ರಮಿಸಿದ್ದಾರೆ. ಸಾಂಸ್ಕೃತಿಕ ಪರಂಪರೆಗೆ ಇದೊಂದು ಗರಿ ಇದ್ದಂತೆ ಎಂದು ಶುಭ ಕೋರಿದರು.
ಮೊನಚು ಏಟು: ಆಶಯ ನುಡಿಗಳನ್ನಾಡಿದ ಬಳ್ಳಾರಿ ಕೃಷ್ಣದೇವರಾಯ ವಿವಿ ಕುಲಸಚಿವ ಡಾ.ರಂಗರಾಜ ವನದುರ್ಗ, ಚುಟುಕು ಸಾಹಿತ್ಯಕ್ಕೆ ಹೆಚ್ಚಿನ ಶಕ್ತಿಯಿದೆ. ಚುಟುಕು ಎನ್ನುವುದು ಚಾಟಿಯಿದ್ದಂತೆ. ಇದು ಮತ್ತೊಂದು ಕಡೆಗೆ ಏಟನ್ನೂ ಕೊಡುತ್ತದೆ. ಶಬ್ಧಗಳ ಆಟವನ್ನೂ ಇಲ್ಲಿ ಕಾಣಬಹುದು. ಸಮಾಜದ ಅನಿಷ್ಟಗಳಿಗೆ ಬಗಣಿ ಗೂಟವೂ ಹೌದು. ಅಂಥ ಅದ್ಭುತ ಶಕ್ತಿ ಚುಟುಕು ಸಾಹಿತ್ಯಕ್ಕಿದ್ದು, ಇಲ್ಲಿ ಬಳಸುವ ಶಬ್ದಗಳು ಅಷ್ಟೇ ಹರಿತವಾಗಿ ಇರುತ್ತವೆ ಎಂದು ನುಡಿದರು.
ರಾಜ್ಯ ಸಮ್ಮೇಳನ ನಡೆಸಲು ಸಿದ್ಧ: ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಸಂಚಾಲಕ ಡಾ.ಎಂಜಿ.ಆರ್. ಅರಸ್ ಮಾತನಾಡಿ, ಚುಟುಕು ಆರಂಭವಾಗಿದ್ದೇ ಶರಣರಿಂದ. ಇದು ಬದುಕಿಗೆ ಲಾಲಿತ್ಯ ನೀಡುವ ಸಾಹಿತ್ಯವಾಗಿದೆ. ಬದಲಾದ ಜಗತ್ತಿನಲ್ಲಿ ಚುಟುಕು ಸಾಹಿತಿಗಳು ಸಾಮಾಜಿಕ ಸುಧಾರಣೆಗೆ ಶ್ರಮಿಸುತ್ತಿದ್ದಾರೆ. 20ನೇ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿರುವ ಸಮ್ಮೇಳನ ನೋಡಿದಾಗ 21ನೇ ರಾಜ್ಯ ಮಟ್ಟದ ಸಮ್ಮೇಳನವನ್ನು ಯಾದಗಿರಿಯಲ್ಲೇ ಮಾಡುವ ಮನಸ್ಸಾಗಿದೆ. ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ರಾಜ್ಯ ಸಮ್ಮೇಳನಕ್ಕೂ ನೇತೃತ್ವ ವಹಿಸುವುದಾದರೆ ಇಲ್ಲಿಯೇ ಆಯೋಜಿಸಲು ಸಿದ್ಧರಿರುವುದಾಗಿ ಅವರು ಘೋಷಿಸಿದರು. ಸಮ್ಮೇಳನಾಧ್ಯಕ್ಷ ಸಿದ್ದರಾಮ ಹೊನಕಲ್ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿದರು. ಪ್ರಭುಲಿಂಗ ನೀಲೂರೆ, ವಿಜಯಕುಮಾರ ತೇಗಲತಿಪ್ಪಿ, ಮಹಿಪಾಲರೆಡ್ಡಿ ಮುನ್ನೂರ, ಡಾ.ಗಾಳೆಪ್ಪ ಪೂಜಾರಿ, ಸಿದ್ದರಾಜರೆಡ್ಡಿ ಇದ್ದರು.
ಹೊನ್ನಸಿರಿ, ಚುಟುಕು ಚಿಂತನ, ಸುಧಾರಸಧಾರೆ, ಹನಿಅಮೃತ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮಾಜಿ ಸಚಿವ, ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ರಾಜಾ ಮದನಗೋಪಾಲ ನಾಯಕ ಸ್ವಾಗತಿಸಿದರು. ಚಸಾಪ ಜಿಲ್ಲಾಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕ ಮಾತನಾಡಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ಪಂಚಾಕ್ಷರಿ ಹಿರೇಮಠ ವಂದಿಸಿದರು.