ಶ್ರೀನಿವಾಸ ವೈಭವೋತ್ಸವಕ್ಕೆ ಚಾಲನೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರ ಲಕ್ಷ್ಮೀ ಭಜನ ಮಂಡಳಿ, ಶ್ರೀನಿಧಿ ಭಜನಾ ಮಂಡಳಿಯ ವತಿಯಿಂದ ಶ್ರೀನಿವಾಸ ವೈಭವೋತ್ಸವಕ್ಕೆ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ ಸುಪ್ರಭಾತದೊಂದಿಗೆ ಚಾಲನೆ ನೀಡಲಾಯಿತು.
ತಿರುಮಲ ತಿರುಪತಿ ದೇವಸ್ಥಾನದ ಆನಂದ ತೀರ್ಥಾಚಾರ್ಯ ಪಗಡಾಲರವರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ 6ಕ್ಕೆ ಸುಪ್ರಭಾತ, ಭಜನೆ ನಡೆಯಿತು. 8ಕ್ಕೆ ಪಂಚಾಮೃತ ಅಭಿಷೇಕ, ಶ್ರೀನಿವಾಸನಿಗೆ ಅಲಂಕಾರ, ಮಹಾಮಂಗಳಾರತಿ ನಡೆದು, ಬೆಳಿಗ್ಗೆ 11ಕ್ಕೆ ಪ್ರಸಾದ ವಿತರಣೆ ನಡೆಯಿತು.
ಜಿಲ್ಲೆಯಲ್ಲಿ ನಾಲ್ಕು ಕಡೆ ವೈಭವೋತ್ಸವ: ತಿರುಪತಿ ತಿರುಮಲ ದೇವಸ್ಥಾನದ ವತಿಯಿಂದ ವಿವಿಧೆಡೆ ಶ್ರೀನಿವಾಸ ವೈಭವೋತ್ಸವ ಕಾರ್ಯಕ್ರಮ ಭಕ್ತರ ಸಹಕಾರದೊಂದಿಗೆ ನಡೆಯುತ್ತಿದ್ದು, ಗುಲ್ಬರ್ಗ ಜಿಲ್ಲೆಯಲ್ಲಿ ಆ.24 ರಿಂದ ನಾಲ್ಕು ಸ್ಥಳದಲ್ಲಿ ವೈಭವೋತ್ಸವ ನಡೆಯುವುದು ಎಂದು ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಆನಂದ ತೀರ್ಥಾಚಾರ್ಯ ಪಗಡಾಲ ಹೇಳಿದರು. ಇಂದಿನ ಯಾಂತ್ರಿಕ ಜೀವನದಲ್ಲಿ ಜನರಲ್ಲಿ ಧರ್ಮ ಪ್ರಜ್ಞೆ ಬಂದು ಧಾರ್ಮಿಕ ಚೈತನ್ಯ ಮೂಡಲು ಮತ್ತು ವಿಶ್ವ ಶಾಂತಿ, ಲೋಕ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಆಯೋಜಿಸಲಾಗಿದೆ ಎಂದರು.