ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಅಸಮಾಧಾನ
ಕನ್ನಡಪ್ರಭ ವಾರ್ತೆ, ರಾಯಚೂರು, ಆ.25
ರಾಷ್ಟ್ರಮಟ್ಟದಲ್ಲಿ ದಲಿತರ ಮೇಲೆ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದು, ದಲಿತರು ಮತ್ತು ಹಿಂದುಳಿದವರಿಗೆ ಸೌಲಭ್ಯ ಪಡೆಯಲು ಹೋರಾಟ ಮಾಡುವಂಥ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವಕೀಲ ಹಾಗೂ ಹೋರಾಟಗಾರ ಮಾರೆಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಮೀಸಲಾತಿ: ಅವರು ನಗರದಲ್ಲಿ ಭಾನುವಾರ ಜಿಲ್ಲಾ ದಲಿತ ನೌಕರರ ಒಕ್ಕೂಟದಿಂದ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳಲ್ಲಿ ದಲಿತರಿಗೆ ಶೇ.30ರಷ್ಟು ಮೀಸಲಾತಿಯನ್ನು ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಜಾರಿಗೆ ತಂದಿದ್ದರು. ಆದರೆ ಈಗ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಂಥ ಮೀಸಲಾತಿ ಆದೇಶ ಹಿಂಪಡೆದಿದೆ ಎಂದು ಟೀಕಿಸಿದರು.
ದಲಿತರಿಗೆ ಮೀಸಲಾತಿ ಕಲ್ಪಿಸುವ ಮಸೂದೆಗೆ ಬೆಂಬಲಿಸದ ವಿವಿಧ ರಾಜಕೀಯ ಪಕ್ಷಗಳ ಬಗ್ಗೆ ದಲಿತ ನೌಕರರು ಎಚ್ಚರದಿಂದರಬೇಕಿದೆ. ಹಾಗೆಯೇ ಮೀಸಲಾತಿಗೆ ಅಡಚಣೆಯಾಗುವವರ ಬಗ್ಗೆ ಚರ್ಚಿಸುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಯಂಕಪ್ಪ ಅಧ್ಯಕ್ಷತೆ ವಹಿಸಿದ್ದರು.ಎಸ್ಸಿ,ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ್ ಮಾತನಾಡಿದರು. ದಸಾಪ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚಟ್ ಹಾಳ್, ನರಸಪ್ಪ, ಮಹಾದೇವಪ್ಪ, ಮುನಿಯಪ್ಪ, ಲಕ್ಷ್ಮೀಕುಮಾರ್ ಸೇರಿ ಅನೇಕರಿದ್ದರು. ದಲಿತ ನೌಕರರ ಒಕ್ಕೂಟದ ಪದಾಧಿಕಾರಿಗಳು ವಿಚಾರಗೋಷ್ಠಿಯಲ್ಲಿದ್ದರು.