ದೇಶಾದ್ಯಂತ ಏಕರೂಪ ಶಿಕ್ಷಣ ಜಾರಿಯಾಗಲಿ
ಕ.ಪ್ರ.ವಾರ್ತೆ ಗುಲ್ಬರ್ಗ ಆ. 25
ದೇಶದಾದ್ಯಂತ ಏಕರೂಪದ ಶಿಕ್ಷಣ ಪದ್ಧತಿ ಜಾರಿಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ಅವರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟೆಯ ಪ್ರಿಯದರ್ಶಿನಿ ಮಂಗಲ ಕಾರ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೆರೆಯ ಮಹಾರಾಷ್ಟ್ರದಲ್ಲಿ ಕನ್ನಡದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಏಕರೂಪ ಶಿಕ್ಷಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೋಷಕರು ವಂತಿಗೆ ಕಟ್ಟುವುದು ತಪ್ಪಲಿದ್ದು, ಸರ್ಕಾರಿ, ಅರೆಸರ್ಕಾರಿ ಎಲ್ಲ ಶಾಲೆಗಳಲ್ಲೂ ಒಂದೇ ಮಾಧ್ಯಮದ ಶಿಕ್ಷಣ ದೊರೆಯಲಿದೆ. ಮಾತೃ ಭಾಷೆಯ ಶಿಕ್ಷಣದಿಂದ ಮಕ್ಕಳ ಪ್ರತಿಭಾ ವಿಕಸನವಾಗುತ್ತದೆ ಎಂದು ಹೇಳಿದರು.
ಕನ್ನಡ ಕಡ್ಡಾಯ: ಅಲ್ಲದೆ ಏಕರೂಪ ಶಿಕ್ಷಣದಿಂದ ಎಲ್ಲರಿಗೂ ಸಮಾನವಕಾಶಗಳು ಲಭಿಸಲಿವೆ. ಅಂತೆಯೇ ಭಾಷೆಯ ಆಧಾರದ ಮೇಲೆ ರಾಷ್ಟ್ರೀಯ ಉದ್ಯೋಗ ನೀತಿಯನ್ನು ಜಾರಿಗೊಳಿಸುವ ಅಗತ್ಯತೆಯಿದೆ. ಇದರಿಂದಾಗಿ ಕರ್ನಾಟಕದಲ್ಲಿ ಉದ್ಯೋಗ ಮಾಡುವವರು ಕಡ್ಡಾಯವಾಗಿ ಕನ್ನಡವನ್ನು ಕಲಿಯಲೇಬೇಕು. ದೇಶದ ಯಾವುದೇ ಭಾಗದಲ್ಲಿ ಕನ್ನಡ ಭಾಷೆಯಲ್ಲಿ ಓದಿದವರಿಗೆ ಉದ್ಯೋಗ ದೊರೆಯಬೇಕು ಎಂದು ಹೇಳಿದರು.
ಇಂಗ್ಲಿಷ್ ಅನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ವಿಷಯವಾಗಿ ಮಾತ್ರ ಬೋಧಿಸುವ ಅಗತ್ಯವಿದೆ. ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಶಿಕ್ಷಣ ನೀಡಬೇಕು ಎಂಬುದನ್ನು ವಿರೋಧಿಸಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿವೆ. ಆದರೆ, ಪ್ರಾಥಮಿಕ ಶಿಕ್ಷಣ ಹಂತ ಯಾವ ಭಾಷೆಯಲ್ಲಿರಬೇಕು ಎಂಬುದನ್ನು ಸ್ಪಷ್ಟಪಡಿಸುವಂತೆ ಸುಪ್ರಿಂಕೋರ್ಟ್ ಸಂವಿಧಾನದ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ ಎಂದು ಅವರು ತಿಳಿಸಿದರು.
ಭಾಷೆ ಗೌರವಿಸಿ: ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಾರಾಷ್ಟ್ರದ ಮಾಜಿ ಗೃಹಮಂತ್ರಿ ಸಿದ್ಧರಾಮ ಮೇತ್ರೆ ಮಾತನಾಡಿ, ಎಲ್ಲ ಭಾಷೆಯನ್ನು ಗೌರವಿಸಬೇಕು. ಭಾರತ ವೈವಿಧ್ಯಮಯ ದೇಶವಾಗಿದ್ದು, ಇಲ್ಲಿ ಪ್ರತಿ 100 ಕಿ.ಮೀ. ಅಂತರದಲ್ಲಿ ಭಾಷೆ ಹಾಗೂ ಸಂಸ್ಕೃತಿಯ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಮಾತೃಭಾಷೆಯೊಂದಿಗೆ ಇತರ ಭಾಷೆಯನ್ನು ಗೌರವಿಸಬೇಕು ಎಂದು ಹೇಳಿದರು.
ಅಕ್ಕಲಕೋಟೆ ಶಾಸಕರಾದ ಎಂ.ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಗಣಸೂರ ಬಮಲಿಂಗೇಶ್ವರ ಹಿರೇಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ಪಂಚಾಚಾರ್ಯ ಪುಣ್ಯಾಶ್ರಮದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಸದಸ್ಯ ಸಿದ್ಧನಗೌಡ ಪಾಟೀಲ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಕ್ಕಲಕೋಟೆಯ ಮಾಜಿ ಶಾಸಕ ಮಹಾದೇವ ಪಾಟೀಲ್, ಅಕ್ಕಲಕೋಟೆಯ ಮಾಜಿ ನಗರಾಧ್ಯಕ್ಷಿಣಿ ಸುವರ್ಣತಾಯಿ ಮಲಗೊಂಡ, ಸ್ವಾಮಿ ಸಮರ್ಥ ಅನ್ನ ಛತ್ರ ಮಂಡಳಿ ಅಧ್ಯಕ್ಷ ಜನಮೇಜಯ ಬೋಸಲೆ ಮಹಾರಾಜ, ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಿನಾಥ ಸ್ವಾಮಿ, ಖೇಡಗಿ ಕಾಲೇಜಿನ ಅಧ್ಯಕ್ಷ ಶಿವಶರಣ ಖೇಡಗಿ, ಗಟ ಶಿಕ್ಷಣಾಧಿಕಾರಿ ಬಿ.ಎನ್. ವಾಘಮೋಡೆ, ಶಿಕ್ಷಣಾಧಿಕಾರಿ ಅಶೋಕ ಭಾಂಜೆ ಸಾಹೇಬ್, ಉದ್ಯೋಗಪತಿ ನರಸಯ್ಯ ಲಾಚರ್ಲಾ, ಖ್ಯಾತ ವರ್ತಕ ಸಿದ್ಧರಾಮಪ್ಪ ಉಣ್ಣದ ಮತ್ತು ಅಡತಿ ವ್ಯಾಪಾರಿ ಶಿವಲಿಂಗ ಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೋತ್ಸಾಹ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ಮಹಾರಾಷ್ಟ್ರದ ವಿದ್ಯಾರ್ಥಿಗಳನ್ನು ಕಳೆದ ಎರಡು ವರ್ಷಗಳಿಂದ ಗೌರವಿಸಿ ಪುರಸ್ಕರಿಸುತ್ತಾ ಬಂದಿದೆ. ಹೊರರಾಜ್ಯದಲ್ಲಿ ಕನ್ನಡವನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಈ ಮಹತ್ವಾಕಾಂಕ್ಷೆ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ.
ಈ ಪುರಸ್ಕಾರವನ್ನು ಶಾಲೆಯ ಮಟ್ಟದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ ಪುರಸ್ಕಾರವು ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ಪ್ರಥಮ ಬಹುಮಾನ ರು. 8 ಸಾವಿರ, ದ್ವಿತೀಯ ಬಹುಮಾನ ರು. 7 ಸಾವಿರ ಹಾಗೂ ತೃತೀಯ ಬಹುಮಾನ ರು. 6 ಸಾವಿರ ರು.ಗಳಲ್ಲದೆ ಸ್ಮರಣಿಕೆ, ಕನ್ನಡ-ಕನ್ನಡ ನಿಘಂಟು, ಕನ್ನಡ-ಆಂಗ್ಲ ನಿಘಂಟು, ಕೈಗಡಿಯಾರ, ಶಾಲಾಬ್ಯಾಗು, ಪ್ರಮಾಣಪತ್ರ ಹಾಗೂ ಪೆನ್‌ಸೆಟ್ ಒಳಗೊಂಡಿದೆ.