ಸಾಧಿಸುವ ಛಲ ಇರಲಿ: ಶಹಾ
ಸೇಡಂ: ಸಾಧಿಸುವ ಛಲ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಬರಬೇಕೆಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಉದಯಕುಮಾರ್ ಶಹಾ ಹೇಳಿದರು.
ಇಲ್ಲಿನ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ, ಜ್ಞಾನಪೀಠ ದಿಗ್ಗಜರ ಸಂಭ್ರಮ ವಿಶೇಷ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಗುರಿ ಮಕ್ಕಳಲ್ಲಿ ಬೆಳೆಯಬೇಕು. ಸಾಧನೆ ಹಾದಿ ಹೂವಿನ ಹಾಸಿಗೆಯಾಗದೆ, ಕಲ್ಲು, ಮುಳ್ಳುಗಳಿಂದ ಕೂಡಿರುತ್ತದೆ. ಅವನ್ನು ಮೆಟ್ಟಿ ನಿಂತಾಗಜೀವನ ಸಾರ್ಥಕ ಎಂದರು.
ಸಾಹಿತಿ, ಪತ್ರಕರ್ತ ಪ್ರಭಾಕರ್ ಜೋಶಿ ತಮ್ಮ ಉಪನ್ಯಾಸದಲ್ಲಿ, ಜ್ಞಾನಪೀಠ ಪ್ರಶಸ್ತಿ ವಿಜೇತರು ತಮ್ಮ ವೃತ್ತಿಯೊಂದಿಗೆ ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಉತ್ಕೃಷ್ಠವಾದ ಸಾಹಿತ್ಯವನ್ನು ರಚಿಸಿದ್ದರು. ಅಲ್ಲದೆ ಅವರ ಇತಿಹಾಸ ಮತ್ತು ಸಾಹಿತ್ಯವನ್ನು ಅನೇಕ ವಿಶ್ವವಿದ್ಯಾಲಯಗಳು ತಮ್ಮ ಪಠ್ಯ ಪುಸ್ತಕದಲ್ಲಿ ಅಳವಡಿಸಿವೆ. ಕಾದಂಬರಿ, ಸಿನಿಮಾಗಳನ್ನು ತಯ್ಯಾರಿಸಿ, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆಯುವಂತಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ನಾಗಯ್ಯಸ್ವಾಮಿ ಬೊಮ್ನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಮಲ್ಲಿನಾಥ ಮಠಪತಿ, ಜಗದೀಶ ಕಡಬಗಾಂವ, ಸಿದ್ದಯ್ಯಸ್ವಾಮಿ ಆಡಕಿ ಇದ್ದರು.
ಶ್ರೀಶೈಲ್ ರುದ್ನೂರ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಮಕ್ಕಳು ಪ್ರಾರ್ಥನೆ ಗೀತೆ ಹಾಡಿದರು. ರವೀಂದ್ರ ಕಲಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮನೋಹರ ವಿಶ್ವಕರ್ಮ ವಂದಿಸಿದರು.