ಸಗರನಾಡಿನ ಐತಿಹಾಸಿಕ ಸ್ಮಾರಕ ರಕ್ಷಣೆ ಅಗತ್ಯ: ಡಾ.ರಮೇಶ ಸಲಹೆ
ಕ.ಪ್ರ.ವಾರ್ತೆ, ಯಾದಗಿರಿ, ಆ.26
ಸಾವಿರಾರು ವರ್ಷಗಳ ಹಿಂದಿನ, ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯಗಳು, ಸ್ಮಾರಕಗಳ ಸಂಖ್ಯೆ ಸಗರನಾಡಿನಲ್ಲಿ ಸಾಕಷ್ಟಿವೆ. ಅವುಗಳ ಮಹತ್ವವನ್ನು ಅರಿತು ಸಂರಕ್ಷಿಸಲು ಎಲ್ಲರೂ ಕಾಳಜಿ ವಹಿಸಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗಗದ ಮುಖ್ಯಸ್ಥ ಡಾ.ರಮೇಶ ನಾಯಕ್ ಹೇಳಿದರು.
ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಭೀಮರಾಯಗುಡಿ ಹಾಗೂ ಸುರಪುರದ ನೃಪತುಂಗ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಆಶ್ರಯದಲ್ಲಿ ಶಹಾಪುರ ತಾಲೂಕಿನ ಏವೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಏವೂರು ದೇವಾಲಯ ಸಂಕೀರ್ಣ- ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರಿತಿಲ್ಲ: ಪ್ರಾಚೀನ ಕಾಲದಿಂದಲೂ ಪೌರಾಣಿಕವಾಗಿ ಹೆಸರು ಪಡೆದಿರುವ ಈ ನಾಡಿನ ಇತಿಹಾಸ ಮಹತ್ವದ್ದಾಗಿದೆ. ಈ ಭಾಗವನ್ನು ಅನೇಕ ರಾಜ ಮನೆತನಗಳು ಆಳಿ ಹೋಗಿದ್ದಾರೆ. ಐತಿಹಾಸಿಕ ಮಹತ್ವ ಹೊಂದಿರುವ ಅನೇಕ ಸ್ಮಾರಕಗಳು ಇಲ್ಲಿವೆ. ಆದರೆ ಅವುಗಳ ಮಹತ್ವವನ್ನು ಜನತೆ ಅರಿತಿಲ್ಲ. ಇದರಿಂದ ಅನೇಕ ಐತಿಹಾಸಿಕ ಸತ್ಯಗಳು ಬಹಿರಂಗಗೊಂಡಿಲ್ಲ. ಇಲ್ಲಿಯ ಏವೂರ ಸೋಮೇಶ್ವರ ದೇವಾಲಯವೂ ಅಷ್ಟೇ ಮಹತ್ವ ಹೊಂದಿದ್ದು, ನಶಿಸಿ ಹೋಗದಂತೆ ಗ್ರಾಮಸ್ಥರು ರಕ್ಷಣೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಏವೂರಿನ ಸೋಮೇಶ್ವರ ದೇವಸ್ಥಾನಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಎರಡನೇ ಜಯಸಿಂಹನ ಕಾಲದಿಂದಲೂ ಐತಿಹಾಸಿಕವಾಗಿ ಉಳಿದುಕೊಂಡು ಬಂದಿರುವವ ಈ ದೇವಾಲಯದ ಮುಂದಿರುವ ಕಟ್ಟಡ ಅಂದು ಉನ್ನತ ಶಿಕ್ಷಣ ನೀಡುವ ಸ್ಥಳವಾಗಿತ್ತು. ಇಂತಹ ಮಹತ್ವ ಸಾರುವ ಹಾಗೂ ಇತಿಹಾಸಕ್ಕೆ ಸಾಕ್ಷಿಯಾಗಿರುವ ಕಟ್ಟಡವನ್ನು ಅಡುಗೆ ಮಾಡಲು ಬಳಸುವುದು ಸರಿಯಲ್ಲ ಎಂದು ಹೇಳಿದರು.
ಇತಿಹಾಸದ ಗತವೈಭವ ಸಾರುವ ಅನೇಕ ಕುರುಹುಗಳು ಈ ಸೋಮೇಶ್ವರ ದೇವಾಲಯದಲ್ಲಿವೆ. ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇವುಗಳ ಸಂರಕ್ಷಣೆ ಅವಶ್ಯವಾಗಿದೆ. ಇಂಥ ಮಹತ್ವದ ಸ್ಮಾರಕಗಳನ್ನು ಉಳಿಸಿಕೊಂಡು ಹೋಗುವುದು ಗ್ರಾಮಸ್ಥರ ಕರ್ತವ್ಯವಾಗಿದೆ. ಹೆಚ್ಚಿನ ಸಂಶೋಧನೆಗಳು ನಡೆದು ಇದೊಂದು ಸಂರಕ್ಷಿತ ತಾಣವಾಗಬೇಕು ಎಂದು ರಮೇಶ ನಾಯಕ ಹೇಳಿದರು.
ರಕ್ಷಣೆ ಅಗತ್ಯ: ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಭಾಸ್ಕರರಾವ್ ಮೂಡಬೂಳ ಮಾತನಾಡಿ, ದೇಶದ ಎಲ್ಲಿಯೂ ಇಲ್ಲದ ಆರು ಅಡಿ ಎತ್ತರದ ಶಾಸನ ಏವೂರ ಗ್ರಾಮದಲ್ಲಿದೆ. ಇದನ್ನು ಗ್ರಾಮಸ್ಥರು ಉಳಿಸಿಕೊಂಡು ಹೋಗಬೇಕು. ಜಗತ್ತನ್ನೇ ಆಕರ್ಷಣೆ ಮಾಡುವ ಶಕ್ತಿ ಏವೂರ ಗ್ರಾಮಕ್ಕಿದ್ದು, ದೇವಾಲಯದ ಒಂದೂ ಕಲ್ಲೂ ಸರಿಸದಂತೆ ಜೋಪಾನ ಮಾಡುತ್ತ ಗ್ರಾಮಸ್ಥರು ಇವುಗಳನ್ನು ಕಾಪಾಡಬೇಕು. ಈ ಶಿಲಾಶಾಸನವೇ ಗ್ರಾಮಕ್ಕೆ ಖಜಾನೆ ಇದ್ದಂತೆ. ಇದನ್ನು ರಕ್ಷಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಕೃಷ್ಣ ಸುಬೇದಾರ್, ಬಸವರಾಜ್ ಬಿ.ಕೆ, ಗೌಡಪ್ಪಗೌಡ, ಶಾಂತಕುಮಾರ್ ಪಾಟೀಲ್, ಎಸ್.ಎಸ್.ನಾಯಕ, ರಾಜು, ದೇವು ಇತರರು ಇದ್ದರು.