ಸರ್ಕಾರಕ್ಕೆ 100ರ ಖುಷಿ, ಗುಲ್ಬರ್ಗಕ್ಕೆ ನೂರಾರು ವೇದನೆ
ಕ.ಪ್ರ.ವಾರ್ತೆ, ಗುಲ್ಬರ್ಗ, ಆ. 26
ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ 100 ದಿನ ತುಂಬಿದ ನಿಮಿತ್ತ ಜಿಲ್ಲಾ ಪಾಲಕ ಸಚಿವ ಖಮರುಲ್ ಇಸ್ಲಾಂ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ ಮಾಡಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಸರ್ಕಾರದ ನೂರು ದಿನದ ಸಾಧನೆ ಒತ್ತಟ್ಟಿಗಿರಲಿ, ಗುಲ್ಬರ್ಗದವರ ನೂರಾರು ವೇದನೆಗೇನು ಹೇಳುತ್ತೀರಿ ಎಂದು ಸಚಿವರಿಗೇ ಪ್ರಶ್ನೆಗಳ ಸುರಿಮಳೆಗರೆದಾಗ ಹಿರಿಯ ಸಚಿವ ಇಸ್ಲಾಂ ತಬ್ಬಿಬ್ಬುಗೊಂಡರು.
ಸುದ್ದಿಗಾರರು ನಗರ ಹಾಗೂ ಜಿಲ್ಲೆಯನ್ನು ಕಾಡುತ್ತಿರುವ ಹಲವು ರಂಗಗಳಲ್ಲಿನ ಜ್ವಲಂತ ಸಮಸ್ಯೆಗಳನ್ನು ಪುರಾವೆ ಸಮೇತ ಸಚಿವರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟಾಗ ಮರುಮಾತನಾಡದೆ ಸಚಿವರು ಸುದ್ದಿಗಾರರು ಪ್ರಸ್ತಾಪಿಸಿದ ಪ್ರತಿಯೊಂದು ವಿಚಾರಗಳಿಗೆ ಕಿವಿಗೊಟ್ಟರಲ್ಲದೆ ಹೀಗೆಲ್ಲಾ ಜಿಲ್ಲೆಯಲ್ಲಿ ನಡೆಯುತ್ತಿದೆಯೆ ಎಂದು ಅಧಿಕಾರಿಗಳನ್ನು ಕರೆಯಿಸಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಸರ್ಕಾರ 100 ದಿನಗಳಲ್ಲಿ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆಯುತ್ತಿದೆ, ನುಡಿದಂತೆ ನಡೆದ ಸರ್ಕಾರ ತಮ್ಮದು ಎಂದ ಇಸ್ಲಾಂ ಈಚೆಗಿನ ಲೋಕಸಬೆ 2 ಉಪಚುನಾವಣೆಗಳಲ್ಲಿ ಜನಾದೇಶ ಕೈ ಪರ ವಾಲಿದ್ದಕ್ಕೆ ಸಿದ್ದರಾಮಯ್ಯ ಸರ್ಕಾರದ 100 ದಿನಗಳ ಸಾಧನೆಯೂ ಕಾರಣ ಎಂದರು.
ಸಚಿವರು ಸರ್ಕಾರದ 100 ದಿನಗಳ ಸಾಧನೆಯ ವಾಲಗ ಊದುತ್ತಿರುವಗಲೇ ಅವರ ಹೇಳಿಕೆಗಳನ್ನು ಮಧ್ಯದಲ್ಲೇ ತುಂಡರಿಸಿದ ಪತ್ರಕರ್ತರು ಒಂದೇ ಸವನೆ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ, ಒಳಚರಂಡಿ... ಹೀಗೆ ಹಲವು ಕ್ಷೇತ್ರಗಳಲ್ಲಿನ ನಿತ್ಯ ಕಾಡುವ ಸಮಸ್ಯೆಗಳನ್ನು ಸಚಿವರೆದೆರು ಬಿಚ್ಚಿಟ್ಟರಲ್ಲದೆ ಇದಕ್ಕೆಲ್ಲ ಪರಿಹಾರ ಒದಗಿಸಲು ಇನ್ನೆಷ್ಟು ದಿನ ಸರ್ಕಾರಕ್ಕೆ ಬೇಕು ಸ್ವಾಮಿ ಎಂದು ಪ್ರಶ್ನಿಸಿದರು.
ರಾಷ್ಟ್ರಪತಿ ವೃತ್ತದಲ್ಲಿರುವ ಸದಾ ಕಕ್ಕಸು ನೀರು ಹೊರಸೂಸುವ 5 ಒಳ ಚರಂಡಿ ಸೇರಿದಂತೆ ನಗಾರಾಧ್ಯ ನೂರಾರು ಚರಂಡಿ ಬಾಯ್ದೆರೆದಿವೆ, ನೂರು ರಸ್ತೆಗಳು ಕುಳಿಬಿದ್ದು ಜನ ನಿತ್ಯ ಕಾಲು- ಕೈ ಮುರಿದುಕೊಳ್ಳುತ್ತಿದ್ದಾರೆ. ಜಿಲ್ಲೆಯಾದ್ಯಂತ ನಾಯಿ ಕಡಿತಕ್ಕೆ ಚುಚ್ಚುಮದ್ದು ಕೊರತೆ ಉಂಟಾಗಿ 100 ದಿನ ಉರುಳಿದೆ.
ಡಿಎಸ್ಡಬ್ಲುಓ ತುಂಬಾ ಸ್ಟ್ರಾಂಗ್ ಗುರು: ಜೇವರ್ಗಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಿಷಾಹಾರ ಸೇವಿಸಿ 39 ಮಕ್ಕಳು ಅಸ್ವಸ್ಥರದ ಘಟನೆಯಲ್ಲಿ ಅಡುಗೆಯವರು, ಕಸಗುಡಿಸುವವರ ಮೇಲೆಯೇ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಕಳಪೆ ಆಹಾರ ನಿಲಯದಲ್ಲಿ ಕಂಡರೂ ಧಾನ್ಯ ಸರಬರಾಜು ಮಾಡುವವರ ಮೇಲಾಗಲಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಮೇಲಾಗಲಿ ಯಾಕ ಇನ್ನೂ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವರು ಅಕ್ಷರಶಃ ನಿರುತ್ತರ.
ತಕ್ಷಣ ಜಿಲ್ಲಾಧಿಕಾರಿಗಳನ್ನು ನೆರವಿಗೆ ಕರೆದ ಇಸ್ಲಾಂ ಜೇವರ್ಗಿ ಘಟನೆಯಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಕೇಳಿದಾಗ ಕ್ರಿಮಿನಲ್ಕೇಸ್ ಹಾಕಲಾಗಿದೆ ಎಂಬ ಸಮಜಾಯಿಷಿ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ನೀಡಿದರು. ಯಾರ ಮೇಲೆ ಕೇಸ್ ಎಂಬ ಪ್ರಶ್ನೆಗೆ ಮತ್ತೆ ನೀರವ ಮೌನ ಸುದ್ದಿಗೋಷ್ಠಿಯಲ್ಲಿ ಕಾಡಿತ್ತು.
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ನವೀನ್ ರಾಜ್ ಸಿಂಗ್ ಮೊದಲ್ಗೊಂಡು ಎಲ್ಲರೂ ಬಂದು ಹೋಗಿದ್ದಾರೆ. ಆಹಾರ ವಿಷವಾಗಲು ಕಾರಣವೇನು ಎಂಬುದಕ್ಕೆ ಆಹಾರದ ನಮೂನೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಬ್ಬರೂ ಜಿಲ್ಲಾ ಅಥವಾ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಯಾಕೆ ಇದುವರೆಗೂ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದಕ್ಕೆ ಸೂಕ್ತ ಉತ್ತರ ನೀಡದೆ ಸಮಜಾಯಿಷಿ ನೀಡುವಲ್ಲೇ ಕಾಲಹರಣ ಮಾಡಿದರು.
ನಾಯಿ ಕಡಿತದ ಚುಚ್ಚುಮದ್ದು ಇಲ್ರಿ: ಜಿಲ್ಲೆಯಲ್ಲಿರುವ ಪಿಎಚ್ಸಿಗಳಲ್ಲಿ ಕಳೆದ 2 ತಿಂಗಳಿಂದ ನಾಯಿ ಕಡಿತದ ಚುಚ್ಚುಮದ್ದುಗಳ ಕೊರತೆ ಕಾಡುತ್ತಿದೆ ಎಂಬ ವಿಚಾರ ಪತ್ರಕರ್ತರು ಸಚಿವರ ಗಮನಕ್ಕೆ ತಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಜ್ಜನಶೆಟ್ಟಿ ಈ ಸಮಸ್ಯೆ ಕೆಲವೆಡೆ ಇದ್ದದ್ದು ತಮ್ಮ ಗಮನಕ್ಕೂ ಬಂದಿದೆ. ಪಿಎಚ್ಸಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನಾಯಿ ಕಡಿತದಿಂದ ತೊಂದರೆಗೊಳಗಾಗಿ ಯಾರೇ ಬಂದರೂ ತಕ್ಷಣ ಚುಚ್ಚುಮದ್ದು ನೀಡುವಂತೆ ಸೂಚಿಸುವುದಾಗಿ ಹೇಳಿದರು.
ಗುಲ್ಬರ್ಗಕ್ಕೆ ಶೀಘ್ರ ನಿರಂತರ ನೀರು: ಚರಂಡಿ ನೀರಿನಿಂದಾಗಿ ಮಲೀನಗೊಳ್ಳುತ್ತಿರುವ ಭೀಮಾನದಿಯಿಂದಲೇ ನಗರದ 6 ಲಕ್ಷ ಜನತೆಗೆ ನೀರು ಪೂರೈಸುತ್ತಿರುವ ವಿಚಾರವಾಗಿಯೂ ಸಚಿವರ ಗಮನ ಸೆಳೆದಾಗ ತಕ್ಷಣ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ. ಜೊತೆಗೇ ಹುಬ್ಬಳ್ಳಿ- ಧಾರವಾಡ ಹಾಗೂ ಗುಲ್ಬರ್ಗ ಮಹಾ ನಗರಗಳಿಗೆ ನಿರಂತರ ನೀರು ಪೂರೈಸುವ ಯೋಜನೆ ಮಂಜೂರಾಗಿದ್ದು, ಈಗಿರುವ ಪ್ರಾಯೋಗಿಕ ವಾರ್ಡ್ಗಳ ಜೊತೆಗೇ ಈ ಸೌಕರ್ಯ ವಿಸ್ತರಿಸುವ ಕೆಲಸ ಶುರುವಾಗುತ್ತದೆ. ಸರ್ಕಾರದ ಹಂತದಲ್ಲಿಯೂ ಈ ಸಂಗತಿ ಚರ್ಚಿಸಲಾಗಿದೆ ಎಂದು ಇಸ್ಲಾಂ ಹೇಳಿದರು.
ರಸ್ತೆ ಮೇಲೆ ಪಾಲಿಕೆಯಿಂದ ಕಸ- ಕಲ್ಲು: ಸತತ ಮಳೆಗೆ ನಗರ ಹಾಗೂ ಜಿಲ್ಲೆಯ ಸಂಪರ್ಕ ರಸ್ತೆಗಳು ಕುಳಿ ಬಿದ್ದು ಹಾಳಾಗಿವೆ, ನಗರದಲ್ಲಂತೂ ಮಹಾನಗರ ಪಾಲಿಕೆ ಕಳೆದೊಂದು ವಾರದಿಂದ ಕಲ್ಲುಗಳನ್ನು ಕುಳಿಗೆ ಸುರಿದು ಹಾಗೇ ಬಿಡುತ್ತಿದೆ. ತಗ್ಗು ತುಂಬಲು ಡಾಂಬಾರು, ಜಲ್ಲಿಕಲ್ಲು ಬಳಸುವಂತೆ ಸೂಚಿಸುವುದಾಗಿ ನುಡಿದರು.
ಭಂಡಾ- ಕಿರಾಣಾ ಬಜಾರ್ ಸಿಸಿ ರಸ್ತೆ: ಅಗಲೀಕರಣಗೊಂಡರೂ ರಸ್ತೆ ನಿರ್ಮಾಣವಿಲ್ಲದೆ ಸಮಸ್ಯೆಗಳ ದಾರಿಯಾಗಿದ್ದ ಕಿರಾಣಾ ಬಜಾರ್ ರಸ್ತೆಗೆ ರು. 3.02 ಕೋಟಿ ವೆಚ್ಚ ಮಾಡಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಹಣಕಾಸು ಇಲಾಖೆಯ ಅನುಮೋದನೆ ದೊರಕಿದ್ದು ಶೀಘ್ರ ಟೆಂಡರ್ ನಿಗದಿಯಾಗಿ ಕಾಮಗಾರಿ ಶುರುವಾಗಲಿದೆ ಎಂದರು.
ರಸ್ತೆ ಅಗಲೀಕರಣಕ್ಕೆ ಹಸಿರು ನಿಶಾನೆ: ಬ್ರಹ್ಮಪುರ ಬಡಾವಣೆಯಲ್ಲಿ ತುಂಬ ತೊಂದರೆಯಾಗಿರುವ ಜಂಗೆ ಬ್ರದರ್ಸ್ ಮನೆಯ ಮುಖಾಂತರದ ರಸ್ತೆ ಅಗಲೀಕರಣಕ್ಕೆ ಸದ್ಯ ಗ್ರೀನ್ ಸಿಗ್ನಲ್ ದೊರಕಿದೆ. ಲಾಲಗೇರಿ ಕ್ರಾಸ್ನಿಂದ ಎಂಎಸ್ಕೆ ಮಿಲ್ ವರೆಗಿನ ಈ 60 ಅಡಿ ರಸ್ತೆಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
ಜಗತ್ ವೃತ್ತದಿಂದ ಖಾಜಾ ಬಂದೇನವಾಜ್ ದರ್ಗಾಕ್ಕೆ ಇರುವ ರಸ್ತೆಯೂ ಹದಗೆಟ್ಟಿದೆ.ಈ ಮಾರ್ಗವನ್ನೂ ಮೇಲ್ದರ್ಜೆಗೇರಿಸುವ ಕೆಲಸ ವಿಬಿಪಿಸಿಎಲ್ ಕಂಪನಿ ವಹಿಸಿಕೊಂಡಿದ್ದು ಶೀಘ್ರ ಕಾಮಗಾರಿ ಶುರುವಾಗಲಿದೆ ಎಂ ರು.
ಪ್ರೆಸ್ ಕವರೇಜ್ ಚೆನ್ನಾಗಿಲ್ರಿ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ 100 ದಿನ ಪೂರೈಸಿ ನುಡಿದಂತೆ ನಡೆಯುತ್ತಿದ್ದರೂ ಸಹ ರಾಜಧಾನಿಯಿಂದ ಹಿಡಿದು ಜಿಲ್ಲೆ, ಹೋಬಳಿವರೆಗೂ ಕೆಲಸಗಳು ಸಾಗಿದ್ದರೂ ಪತ್ರಿಕೆಗಳಲ್ಲಿ ಎಲ್ಲರು ನೋಡುವಂತಹ ಸುದ್ದಿಗಳೇ ಬರುತ್ತಿಲ್ಲ ಎಂದವರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ರಾಜ್ಯ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ.
ಹೀಗೆ ಹೇಳುತ್ತಲೇ ಸುದ್ದಿಗೋಷ್ಠಿಗೆ ಮುನ್ನಡಿ ಹೇಳಿದಾಗ ಹಾಜರಿದ್ದ ಪತ್ರಕರ್ತರು ಜನಪರ ಕೆಲ್ಸಗಳು ಎಲ್ಲರನ್ನು ಕಾಣುವಂತೆ ಇದ್ದಲ್ಲಿ ಅವು ತಾನಾಗಿಯೇ ಪತ್ರಿಕೆಯಲ್ಲಿ ಪ್ರತಿಫಲಿಸುತ್ತವೆ. ಗುಲ್ಬರ್ಗದಲ್ಲಿ ಅಂತಹ ಯಾವ ಕೆಲಸಗಳು ನೂರು ದಿನಗಳಲ್ಲಿ ಮಾಡಿದ್ದೀರಿ ತೋರಿಸಿರಿ, ನಿಮ್ಮ ಕೆಲಸಗಳ ಮಾಹಿತಿ ಕೊಡಿ... ಎಂದು ಸಚಿವರಿಗೆ ಪಾಟಿ ಸವಾಲು ಹಾಕಿದರು.
ಪತ್ರಿಕೆಯವರಿಂದ ತಮ್ಮ ಮಾತಿಗೆ ತಕ್ಷಣದಲ್ಲೇ ಪ್ರತಿಕ್ರಿಯೆ ವ್ಯಕ್ತವಾದಾಗ ಸಚಿವರು ಸುದ್ದಿಗೋಷ್ಠಿ ಮಧ್ಯೆ ಇಂತಹ ಮಾತುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರು.