ಆಸ್ತಿಗಾಗಿ ತಾಯಿಯನ್ನೇ ಕೊಂದ ಮಗ
ಗುಲ್ಬರ್ಗ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದ ಅಮಾನವೀಯ ಘಟನೆ ಫರಹತಾಬಾದ್ ಠಾಣೆ ವ್ಯಾಪ್ತಿಯ ಕೊಳ್ಳೂರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕ್ಯಾದಿಗಮ್ಮ ಗಂಡ ಮಹಾದೇವಪ್ಪ ಪೂಜಾರಿ(50) ಎಂಬುವವರನ್ನು ಅವರ ಮಗ ಭೀಮಪ್ಪ ತಂದೆ ಮಹಾದೇವಪ್ಪ ಪೂಜಾರಿ(26) ಎಂಬಾತ ಕೊಲೆಗೈದು ಪರಾರಿಯಾಗಿದ್ದಾನೆ. ಚಾಕುವಿನಿಂದ ಹೊಟ್ಟೆ ಮತ್ತು ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ.
ಕೊಲೆಯಾದ ಕ್ಯಾದಿಗಮ್ಮನ ಪತಿ ಮಹಾದೇವಪ್ಪ ಪೂಜಾರಿ ಹೆಸರಿನಲ್ಲಿ ಸುಮಾರು 20 ಎಕರೆ ಜಮೀನು ಇತ್ತು ಎನ್ನಲಾಗಿದ್ದು, ಆತ ನಿಧನವಾದ ಮೇಲೆ ಮಗ ಭೀಮಪ್ಪ ಪೂಜಾರಿ ತನ್ನ ಹೆಸರಿಗೆ ಜಮೀನು ಮಾಡಿಕೊಂಡಿದ್ದ. ಕೊಲೆಯಾದ ಕ್ಯಾದಿಗಮ್ಮ ಮತ್ತು ಆಕೆಯ ಮಗಳು ಬೇರೆ ಮನೆ ಮಾಡಿಕೊಂಡಿದ್ದರು. ಮಗ ಭೀಮಪ್ಪ ಪೂಜಾರಿ ತನ್ನ ಹೆಸರಿಗೆ ಹೊಲ ಮಾಡಿಕೊಂಡ ವಿಷಯ ತಿಳಿದು ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಆಸ್ತಿಯನ್ನು ತಾಯಿ, ಮಗ ಹಾಗೂ ಮಗಳ ನಡುವೆ ಹಂಚಿಕೆ ಮಾಡುವಂತೆ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿತ್ತು. ಇದರಿಂದ ಕುಪಿತಗೊಂಡ ಭೀಮಪ್ಪ ಪೂಜಾರಿ ಮಂಗಳವಾರ ಬೆಳಗ್ಗೆ 8ರ ಸುಮಾರಿಗೆ ತನ್ನ ತಾಯಿ ಕ್ಯಾದಿಗೆಮ್ಮನನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.