'ಡಿಸೆಂಬರ್‌ನಲ್ಲಿ ಕಲಂ 371 ಜಾರಿ'
ಚಿಂಚೋಳಿ: ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಗೆ ಸಂವಿಧಾನ 371 (ಜೆ) ಕಲಂ ಜಾರಿಗೆಯಾಗಿದ್ದು, ರಾಜ್ಯ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದ್ದು, ಡಿಸೆಂಬರ್ ತಿಂಗಳಿನಲ್ಲಿ ಜಾರಿಗೆ ಬರಲಿದೆ. ಇದರಿಂದ ಹಿಂದುಳಿದ ಪ್ರದೇಶದ ಗಡಿಭಾಗದ ಜನರಿಗೆ ಮೂಲ ಸೌಲಭ್ಯಗಳು ಸಿಗಲಿವೆ ಎಂದು ಶಾಸಕ ಡಾ. ಉಮೇಶ ಹೇಳಿದರು.
ತಾಲೂಕಿನ ಗಡಿಭಾಗದ ಕುಂಚಾವರಂ ವಲಯದ ಜಿಲವರ್ಷ ಗ್ರಾಮದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಕುಂಚಾವರಂ ಹೆಚ್ಚಾಗಿ ಅರಣ್ಯ ಪ್ರದೇಶವಾಗಿದೆ. ಅನೇಕ ವರ್ಷಗಳಿಂದ ಜಮೀನು ಸಾಗುವಳಿ ಮಾಡಿದ ರೈತರಿಗೆ ಇನ್ನು ಮುಂದೆ ಅರಣ್ಯ ಇಲಾಖೆಯಿಂದ ತೊಂದರೆ ತಪ್ಪಿಸಲು ಸರ್ಕಾರ ಸೂಕ್ತಕ್ರಮ ಕೈಕೊಂಡಿದೆ ಎಂದರು.
ಕಳೆದ ತಿಂಗಳು ನಡೆದ ವಿಧಾನಸಭೆ ಅಧಿವೇಶನದಲ್ಲಿ ಅರಣ್ಯ ಸಚಿವರು ಹೊಸ ಅರಣ್ಯ ನೀತಿಯನ್ನು ಘೋಷಿಸಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ಬಸ್ಸಿನ ಸೌಲಭ್ಯವಿಲ್ಲದ ಕಾರಣ ಶಾಲಾ ಕಾಲೇಜು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲವರ್ಷ, ಮಗದಂಪುರ, ಪೋಚಾವರಂ, ಶಿವರಾಮಪುರ, ಶಿವರೆಡ್ಡಿಪಳ್ಳಿ ಮುಂತಾದ ಗ್ರಾಮಗಳಿಗೆ ಬಸ್ಸಿನ ಅನುಕೂಲ ಮಾಡಲಾಗುವುದು ಎಂದು ಶಾಸಕರು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಡಾ.ಅಂಜನಯ್ಯ, ತಾಪಂ ಸದಸ್ಯ ನರಸಿಂಹ ಕುಂಬಾರ, ನರಸಿಂಹಲೂ ಸವಾರಿ, ನಾಗರೆಡ್ಡಿ ಪಾಟೀಲ್, ರಾಜು ರಾಠೊಡ, ತುಳಸೀರಾಮ ರಾಠೋಡ, ಮಧುಕರ್ ಪಾಟೀಲ್, ವೆಂಕಟೇಶ, ರಾಮುಲು ಇತರರು ಉಪಸ್ಥಿತರಿದ್ದರು. ಮಲ್ಲಾರೆಡ್ಡಿ ಸ್ವಾಗತಿಸಿದರು. ಶಿವರಾಮ ರಾಠೋಡ ನಿರೂಪಿಸಿದರು.